Asianet Suvarna News Asianet Suvarna News

ಸಾಲ ಮನ್ನಾಕ್ಕಿಂತ ಉಪಯುಕ್ತ ಯೋಜನೆ: ಚಲುವರಾಯಸ್ವಾಮಿ

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕಾಂಗ್ರೆಸ್‌ ಪಕ್ಷ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳು ಸಾಲ ಮನ್ನಾಕ್ಕಿಂತಲೂ ಉಪಯುಕ್ತವಾದ ಯೋಜನೆಗಳು ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು.

More useful scheme than loan waiver: Chaluvarayaswamy snr
Author
First Published Jan 21, 2023, 6:35 AM IST

 ಮಂಡ್ಯ   : ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕಾಂಗ್ರೆಸ್‌ ಪಕ್ಷ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳು ಸಾಲ ಮನ್ನಾಕ್ಕಿಂತಲೂ ಉಪಯುಕ್ತವಾದ ಯೋಜನೆಗಳು ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು.

ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಜ.27ರಂದು ಮಂಡ್ಯದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರು., ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ಇದೆಲ್ಲಾ ಸೇರಿದರೆ 5 ವರ್ಷಕ್ಕೆ ಪ್ರತಿ ಕುಟುಂಬಕ್ಕೆ 3 ಲಕ್ಷ ರು. ಕೊಡುಗೆ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ಸಾಲ ಮನ್ನಾದಿಂದ ಹೆಚ್ಚು ಉಪಯೋಗವಿಲ್ಲ:

ಸಾಲ ಮನ್ನಾದಿಂದ ಕನಿಷ್ಠ 50 ಸಾವಿರ ರು.ವರೆಗಷ್ಟೇ ರೈತರಿಗೆ ಉಪಯೋಗ ದೊರೆಯಲಿದೆ. ಅದೇ ದೊಡ್ಡ ಸಾಧನೆಯಲ್ಲ. ಕಾಂಗ್ರೆಸ್‌ ಘೋಷಣೆಗಳ ಹಿಂದೆ ರೈತರು ಹಾಗೂ ಸಮಾಜದ ಎಲ್ಲ ವರ್ಗದ ಜನರ ಹಿತ ಅಡಗಿದೆ. ಇದನ್ನು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಇನ್ನೂ ಹಲವು ಯೋಜನೆ ಪ್ರಕಟ:

ಚುನಾವಣೆ ವೇಳೆಗೆ ಪ್ರಣಾಳಿಕೆಯಲ್ಲಿ ಜನರಿಗೆ ಇನ್ನೂ ಹಲವು ಯೋಜನೆಗಳನ್ನು ನೀಡುವುದಕ್ಕೆ ಸಿದ್ಧರಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲಾಗದು. ಮಂಡ್ಯದಿಂದಲೇ ಆ ಸಂದೇಶ ರವಾನೆಯಾಗಬೇಕಾದರೆ ಹೆಚ್ಚು ಸ್ಥಾನಗಳನ್ನು ಜಿಲ್ಲೆಯಲ್ಲಿ ಗೆಲ್ಲಬೇಕು. ಪ್ರಜಾಧ್ವನಿ ಮುಖಾಂತರ ಗೆಲುವಿನ ಸಂದೇಶ ರಾಜ್ಯಕ್ಕೆ ತಲುಪಬೇಕು ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬುವ ಮಾತುಗಳನ್ನಾಡಿದರು.

ಉದಾಸೀನ ಮಾಡಬೇಡಿ:

ಜಿಲ್ಲೆಯೊಳಗೆ ಜೆಡಿಎಸ್‌, ನಂತರ ಬಿಜೆಪಿ ಪ್ರತಿಸ್ಪರ್ಧಿಗಳಾಗಿವೆ. ಈ ಎರಡೂ ಪಕ್ಷಗಳನ್ನು ಕಡೆಗಣಿಸದೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ಯಾವುದೇ ಕಾರಣಕ್ಕೂ ಉದಾಸೀನ ಮಾಡಬೇಡಿ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಪ್ರಜಾಧ್ವನಿ ಕಾರ್ಯಕ್ರಮವನ್ನು ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲೇ ನಡೆಸಲು ತೀರ್ಮಾನಿಸಿ ಅನುಮತಿ ಪಡೆದುಕೊಂಡಿದ್ದೇವೆ. ಜೆಡಿಎಸ್‌ ಪಂಚರತ್ನ ರಥಯಾತ್ರೆ, ಬಿಜೆಪಿ ಜನಸಂಕಲ್ಪ ಯಾತ್ರೆ ಮೀರಿಸುವಂತೆ ಜನರನ್ನು ಸಂಘಟಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದರೊಂದಿಗೆ ಪ್ರಜಾಧ್ವನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾಧ್ಯಕ್ಷೆ ಅಂಜನಾ, ಆಕಾಂಕ್ಷಿಗಳಾದ ಕೀಲಾರ ರಾಧಾಕೃಷ್ಣ, ಗಣಿಗ ರವಿಕುಮಾರ್‌, ಅಮರಾವತಿ ಚಂದ್ರಶೇಖರ್‌, ಡಾ.ಹೆಚ್‌.ಕೃಷ್ಣ, ಹಾಲಹಳ್ಳಿ ರಾಮಲಿಂಗಯ್ಯ, ಸಿದ್ದಾರೂಢ ಸತೀಶ್‌, ಎಂ.ಎಸ್‌.ಚಿದಂಬರ, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು, ಯುವ ಕಾಂಗ್ರೆಸ್‌ ಅಧ್ಯಕ್ಷ ವಿಜಯ್‌ಕುಮಾರ್‌ ಸೇರಿದಂತೆ ಇತರರಿದ್ದರು.

ಕಾಂಗ್ರೆಸ್‌ಗೆ 130 ಸ್ಥಾನ ಸಿಗೋದು ಖಚಿತ: ಕುಸುಮ ಕುಮಾರ್‌ ಚೌಧರಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 130 ಸ್ಥಾನ ಸಿಗುವುದು ಖಚಿತ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ವೀಕ್ಷಕ ಕುಸುಮ ಕುಮಾರ್‌ ಚೌಧರಿ ವಿಶ್ವಾಸದಿಂದ ನುಡಿದರು.

ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಿಂದ ನಡೆಸಲಾದ ಸರ್ವೆ ಪ್ರಕಾರ ರಾಜ್ಯದೊಳಗೆ ಕಾಂಗ್ರೆಸ್‌ ಪರವಾದ ವಾತಾವರಣವಿದೆ. 130 ಸ್ಥಾನಗಳಲ್ಲಿ ಪಕ್ಷ ಗೆಲ್ಲುವುದು ಖಚಿತ. ಈಗಾಗಲೇ ಅರ್ಧದಷ್ಟುಗೆದ್ದಿದ್ದೇವೆ. ಆದರೂ ನಿರ್ಲಕ್ಷ್ಯ ಮಾಡದೆ ಜಿಲ್ಲೆಯೊಳಗೆ ಏಳಕ್ಕೆ ಏಳು ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಜಿಲ್ಲೆಯೊಳಗೆ ಸಾಕಷ್ಟುಮಂದಿ ಆಕಾಂಕ್ಷಿಗಳಿದ್ದಾರೆ. ಆದರೆ, ಎಲ್ಲರಿಗೂ ಟಿಕೆಟ್‌ ಸಿಗುವುದಿಲ್ಲ. ಪಕ್ಷ ಯಾರಿಗೇ ಬಿ-ಫಾರಂ ಕೊಟ್ಟರೂ ಭಿನ್ನಮತ, ವೈಮನಸ್ಸನ್ನು ಮರೆತು ಒಗ್ಗಟ್ಟಿನಿಂದ ದುಡಿಯಬೇಕು. ಕಾಂಗ್ರೆಸ್‌ ಸಮಿತಿಯ ಎಲ್ಲಾ ಹುದ್ದೆಗಳನ್ನು 15 ದಿನಗಳೊಳಗೆ ಭರ್ತಿ ಮಾಡಬೇಕು. 10 ದಿನಗಳೊಳಗೆ ಬೂತ್‌ ಕಮಿಟಿಯನ್ನು ರಚಿಸಿ ಪಟ್ಟಿನೀಡಿದರೆ ಅದನ್ನು ಎಐಸಿಸಿಗೆ ಕಳುಹಿಸುವುದಾಗಿ ಹೇಳಿದರು.

Follow Us:
Download App:
  • android
  • ios