ಲಾಕ್‌ಡೌನ್‌ನಿಂದ ರೈತರಿಗೇ ಹೆಚ್ಚು ತೊಂದರೆ: ಡಿಕೆಶಿ
* ಸರ್ಕಾರ ಬೆಳೆಯ ಅರ್ಧ ದರ ನೀಡಿದರೂ ಉಪಕಾರ
* ಕಾಂಗ್ರೆಸ್ ಪಕ್ಷದ ವತಿಯಿಂದ ವಿವಿಧ ಸೇವಾಕಾರ್ಯ
* ಸರ್ಕಾರದ ಬೆಂಬಲ ಬೆಲೆಯೂ ಸಿಗದೆ ರೈತರ ಪರದಾಟ
ಹಾಸನ/ಮಂಡ್ಯ(ಜೂ.04): ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ರೈತರು ತಾವು ಬೆಳೆದಿರುವ ತರಕಾರಿ, ಹಣ್ಣು, ಹೂವು ಇನ್ನಿತರೆ ಬೆಳೆಗಳಿಗೆ ಮಾರಾಟ ಮಾಡಲಾಗದೆ, ಸರ್ಕಾರದ ಬೆಂಬಲ ಬೆಲೆಯೂ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಸರ್ಕಾರವೇ ರೈತರ ಬೆಳೆಗಳನ್ನು ಖರೀದಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಾಸನ ನಗರ, ಮಂಡ್ಯ ಜಿಲ್ಲೆಯ ನಾಗಮಂಗಲ, ಮಳವಳ್ಳಿಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿವಿಧ ಸೇವಾಕಾರ್ಯ, ಆರೋಗ್ಯ ಸುರಕ್ಷಾ ಮತ್ತು ಆಹಾರ ಕಿಟ್‌ಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಹಲವು ಜಿಲ್ಲೆಗಳಲ್ಲಿ ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ರೈತರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಆದ್ದರಿಂದ ರೈತರ ಬೆಳೆಗಳನ್ನು ಸರ್ಕಾರವೇ ನೇರವಾಗಿ ಖರೀದಿಸಿ ಅರ್ಧದಷ್ಟು ದುಡ್ಡು ಕೊಟ್ಟರೂ ಸಾಕು. ರೈತರು ಸ್ವಲ್ಪ ಮಟ್ಟಿಗಾದರೂ ಚೇತರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದರು.
ಡಿಕೆಶಿ ನೇತೃತ್ವದಲ್ಲಿ ಕಾರ್ಯಕ್ರಮ : ಕೈ ನಾಯಕರಿಂದ ಕೊರೋನಾ ರೂಲ್ಸ್ ಬ್ರೇಕ್
ರಾಜ್ಯ ಸರ್ಕಾರ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ವಿರೋಧ ಪಕ್ಷದ ಸಲಹೆ ಕೇಳಲಿ, ನಾವೇನು ಮೇಲೆ ಬಿದ್ದು ಸಲಹೆ ಕೊಡುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು. ಲಾಕ್‌ಡೌನ್ ಬಗ್ಗೆ ಸರ್ಕಾರದ ಬಳಿಯೇ ಎಲ್ಲ ಮಾಹಿತಿ ಇದೆ. ಅವರೇ ತೀರ್ಮಾನಿಸಲಿ, ಜನರ ಜೀವ ಉಳಿಸಲಿ ಎನ್ನುವುದೇ ನಮ್ಮ ಸಲಹೆ. ಅವರಿಗೆ ರಾಜ್ಯದಲ್ಲಿ ವಿರೋಧ ಪಕ್ಷ ಇದೆ ಎನ್ನುವುದೇ ಗೊತ್ತಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡಿ, ಜನರ ಆರ್ಥಿಕ ಸಂಕಟ ನಿವಾರಣೆ ಮಾಡಿ. ಸೋಂಕಿತರಿಗೆ ಔಷಧ ಕೊಡಿಸಲಿ. ಆಸ್ಪತ್ರೆಗಳಲ್ಲಿ ಕೋವಿಡ್ ಕೆಲಸ ಮಾಡುವವರಿಗೆ ಒಂದು ವರ್ಷದಿಂದ ಸಂಬಳ ನೀಡಿಲ್ಲ. ಮೊದಲು ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.