Asianet Suvarna News Asianet Suvarna News

ಯಾದಗಿರಿ: ವರುಣನ ಅಬ್ಬರಕ್ಕೆ 500 ಎಕರೆಗೂ ಹೆಚ್ಚು ಭತ್ತ ನಾಶ..!

ದೀಪಾವಳಿ ಹಬ್ಬವಾದ ನಂತರ ಭತ್ತ ಕಟಾವು ಆಸೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ನ.6ರಂದು ಸುರಿದ ಬಿರುಗಾಳಿ ಸಹಿತ ಮಳೆಗೆ 500ಕ್ಕೂ ಎಕರೆ ಭತ್ತ ನೆಲಕ್ಕುರುಳಿದ್ದು, ಅಪಾರ ನಷ್ಟ ಉಂಟಾಗಿದೆ. 

More than 500 acres of Paddy Crop Loss due to Rain in Yadgir grg
Author
First Published Nov 10, 2023, 12:06 PM IST

ನಾಗರಾಜ್ ನ್ಯಾಮತಿ

ಸುರಪುರ(ನ.10): ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿಯಿಂದ ಸುರಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ 500 ಎಕರೆಗೂ ಹೆಚ್ಚು ಭತ್ತ ಧರೆಗುರುಳಿ ಅನ್ನದಾತರಿಗೆ ಅಪಾರ ನಷ್ಟ ಉಂಟಾಗಿದೆ.

ಅತಿ ಹೆಚ್ಚು ಭಾಗ ನೀರಾವರಿಗೆ ಒಳಪಟ್ಟಿದ್ದರಿಂದ ತಾಲೂಕಿನ ಸುರಪುರದಲ್ಲಿ 9900 ಹೆಕ್ಟೇರ್, ಕೆಂಭಾವಿ-7850 ಹೆಕ್ಟೇರ್, ಕಕ್ಕೇರಾ-10,500 ಹೆಕ್ಟೇರ್ ಸೇರಿ ಒಟ್ಟು ಮುಂಗಾರಿನಲ್ಲಿ 28.84 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ದೀಪಾವಳಿ ಹಬ್ಬವಾದ ನಂತರ ಭತ್ತ ಕಟಾವು ಆಸೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ನ.6ರಂದು ಸುರಿದ ಬಿರುಗಾಳಿ ಸಹಿತ ಮಳೆಗೆ 500ಕ್ಕೂ ಎಕರೆ ಭತ್ತ ನೆಲಕ್ಕುರುಳಿದ್ದು, ಅಪಾರ ನಷ್ಟ ಉಂಟಾಗಿದೆ ಎಂದು ವಾಗಣಗೇರಾ ರೈತ ಬೈಯಲಪ್ಪಗೌಡ ನಾಯಕ ತಿಳಿಸಿದ್ದಾರೆ.

ಯಾದಗಿರಿ: ಸ್ಟೀಯರಿಂಗ್‌ ಕಿತ್ತು ಹಳ್ಳಕ್ಕೆ ಬಿದ್ದ ಸಾರಿಗೆ ಸಂಸ್ಥೆ ಬಸ್‌, ತಪ್ಪಿದ ಭಾರೀ ದುರಂತ

ಕೆಂಭಾವಿ ಹೋಬಳಿಯ ಯಾಳಗಿ-59, ಕೆಂಭಾವಿ-100, ಗೌಡಗೇರಾ-50, ಮುರಕನಾಳು-50, ಸುರಪುರ ಹೋಬಳಿಯ ವಾಗಣಗೇರಾ-80, ತಳವಾರಗೇರಾ-40, ದೇವಾಪುರ-100, ಅರಳಹಳ್ಳಿ-40, ಆಲ್ದಾಳ-70 ಸೇರಿ ಅಂದಾಜು 500ಕ್ಕೂ ಎಕರೆ ಆರ್‌ಎನ್ಆರ್ ತಳಿ ಭತ್ತ ನೆಲಕ್ಕುರುಳಿದೆ.

ಎಕರೆಗೆ 35ರಿಂದ 40 ಚೀಲ ಇಳುವರಿ ನಿರೀಕ್ಷಿಸಲಾಗಿದ್ದು, ಇನ್ನೊಂದು ವಾರದ ನಂತರ ಭತ್ತ ಕಟಾವು ಮಾಡಲಿದ್ದೇವು. ಎಕರೆಗೆ 30 ಸಾವಿರಕ್ಕೂ ಅಧಿಕ ಖರ್ಚು ಮಾಡಿದ್ದೇವೆ. ಉತ್ತಮ ಬೆಲೆಯಿದ್ದ ಕಾರಣ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದೇವು. ಧಾರಾಕಾರವಾಗಿ ಸುರಿದ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ,. ಕೂಡಲೇ ಎಕರೆಗೆ 20 ಸಾವಿರ ರು. ಪರಿಹಾರ ಘೋಷಿಸಬೇಕು ಎಂದು ರೈತ ಮುಖಂಡ ಹಣಮಂತ್ರಾಯ ಮಡಿವಾಳ ಒತ್ತಾಯಿಸಿದ್ದಾರೆ.
ಭತ್ತ ಕಟಾವು ಸಮಯದಲ್ಲಿ ಮಳೆ ಬಂದಿರುವುದು ಆಕಾಶವೇ ತಲೆಯ ಮೇಲೆ ಬಿಂದತ್ತಾಗಿದೆ. ಕಟಾವು ಮಾಡಿ ರಾಶಿ ಹಾಕುವ ಸಂದರ್ಭದಲ್ಲಿ ವರುಣ ನಮ್ಮ ಮೇಲೆ ಮುನಿಸಿಕೊಂಡಿದ್ದೇನೆ. ರೈತನ ಬದಕು ಮಳೆಯೊಂದಿಗೆ ಜೂಜಾಟ ಎನ್ನುವ ಹಿರಿಯರ ಮಾತು ಅನುಭವಕ್ಕೆ ಬಂದಿದೆ ಎಂದು ನೊಂದ ರೈತ ತಳವಾರಗೇರಿ ಗುಡದಪ್ಪ ಹುಜರತಿ ತಿಳಿಸುತ್ತಾರೆ.

ನ.6 ರಂದು ಶನಿವಾರ ಸಂಜೆ ಸುಮಾರು 5ರಿಂದ 7.30 ರವರೆಗೆ ಬಿರುಗಾಳಿ ಸಹಿತ ಮಳೆ 42.2 ಮಿ.ಮೀ. ಆಗಿದೆ. ಇದರಿಂದ ಕೆಂಭಾವಿ ಹೋಬಳಿ ಭಾಗದಲ್ಲಿ 200ಕ್ಕೂ ಹೆಚ್ಚು ಎಕರೆ ಭತ್ತ ನಾಶವಾಗಿದೆ.

ಕೃಷಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಬೆಳೆ ನಾಶ ಪರಿಶೀಲಿಸುತ್ತಿದ್ದೇವೆ ಎಂದು ಕಂದಾಯ ನಿರೀಕ್ಷಕ ರಾಜಾಸಾಬ್ ತಿಳಿಸಿದ್ದಾರೆ.

ರಾಜ್ಯದ್ದಲ್ಲ, ಕೇಂದ್ರದ ಖಜಾನೆ ಖಾಲಿಯಾಗಿದೆ: ಸಚಿವ ಎಚ್‌. ಕೆ.ಪಾಟೀಲ್‌

ನಾಲ್ಕಾಸು ಸಿಗುತ್ತೆ ಎನ್ನುವ ಆಸೆಯಲ್ಲಿ ಕೃಷಿ ಮಾಡುತ್ತೇವೆ. ಆದರೆ, ಮಳೆ ರೈತರ ಅನ್ನವನ್ನು ಕಸಿದುಕೊಂಡಿದೆ. ಸಾಲಸೂಲ ಮಾಡಿ ಎಕರೆಗೆ 35 ರಿಂದ 40 ಸಾವಿರ ಖರ್ಚು ಮಾಡಿದ್ದೇವೆ. ಸರಕಾರ ರೈತರ ಸಮಸ್ಯೆ ನೋಡಿ ಎಕರೆಗೆ 30 ಸಾವಿರ ಪರಿಹಾರ ನೀಡಿ ರೈತರ ಜೀವ ಉಳಿಸಬೇಕು ಎಂದು ಕಿಸಾನ್ ಸಭಾ ತಾಲೂಕಾಧ್ಯಕ್ಷ ಚನ್ನಪ್ಪಗೌಡ ಜಕ್ಕಣ್ಣಗೌಡ ತಿಳಿಸಿದ್ದಾರೆ. 

ಮಳೆಯಿಂದ ತಾಲೂಕಿನಲ್ಲಿ ಬೆಳೆಗಳು ನಾಶವಾಗಿವೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಂದಾಯ ಮತ್ತು ಕೃಷಿ ಅಧಿಕಾರಿಗಳಿಗೆ ಬೆಳೆನಾಶವನ್ನು ಜಂಟಿಯಾಗಿ ಸರ್ವೇ ಮಾಡಲು ಸೂಚಿಸಲಾಗಿದೆ. ವರದಿ ನಂತರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುತ್ತದೆ. ರೈತರಿಗೆ ಪರಿಹಾರ ಕೊಡಿಸಲು ಯತ್ನಿಸಲಾಗುವುದು ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ಹೇಳಿದ್ದಾರೆ. 

Follow Us:
Download App:
  • android
  • ios