Asianet Suvarna News Asianet Suvarna News

Children's Vaccine: ಬೆಂಗಳೂರಿನಲ್ಲಿ ಮೊದಲ ದಿನ 29000+ ಮಕ್ಕಳಿಗೆ ಲಸಿಕೆ: ಶೇ.47ರಷ್ಟುಗುರಿ ಸಾಧನೆ!

*ನಗರದಲ್ಲಿ 29,425 ಮಕ್ಕಳಿಗೆ ಮೊದಲ ಡೋಸ್‌
*ಶೇ.47ರಷ್ಟುಗುರಿ ಸಾಧನೆ: 4.41 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ
*ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೌನ್ಸೆಲಿಂಗ್‌
 

More than 29000  Children received Covid 19 Vaccine on the first day in Bengaluru mnj
Author
Bengaluru, First Published Jan 4, 2022, 6:01 AM IST

ಬೆಂಗಳೂರು (ಜ.4): ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 15ರಿಂದ 18 ವರ್ಷದೊಳಗಿನವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತಿದೆ. ಮೊದಲ ದಿನವಾದ ಸೋಮವಾರ 29,425 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ.47ರಷ್ಟುಗುರಿ ಸಾಧಿಸಿದಂತಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸಹಯೋಗದಲ್ಲಿ ಬಿಬಿಎಂಪಿಯು 15ರಿಂದ 18 ವರ್ಷದೊಳಗಿನ 4.41 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದೆ.

ಮೊದಲ ದಿನ ಬೊಮ್ಮನಹಳ್ಳಿ, ದಾಸರಹಳ್ಳಿ, ಪೂರ್ವ ವಲಯ, ಪಶ್ಚಿಮ ವಲಯ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ 255 ಶಾಲಾ ಮತ್ತು ಕಾಲೇಜುಗಳ 62,706 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ, ದಾಸರಹಳ್ಳಿಯಲ್ಲಿ 2,025, ರಾಜರಾಜೇಶ್ವರಿ ನಗರದಲ್ಲಿ 3,444, ಬೊಮ್ಮನಹಳ್ಳಿಯಲ್ಲಿ 3,812, ಮಹದೇವಪುರದಲ್ಲಿ 2,706, ಪಶ್ಚಿಮ ವಲಯದಲ್ಲಿ 7,265, ಯಲಹಂಕದಲ್ಲಿ 3,113, ದಕ್ಷಿಣ ವಲಯದಲ್ಲಿ 3,291 ಮತ್ತು ಪೂರ್ವ ವಲಯದಲ್ಲಿ 3767 ಮಕ್ಕಳು ಸೇರಿದಂತೆ ಒಟ್ಟು 29,423 (ಶೇ.46.96)ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: Coronavirus Update: ಕೊರೋನಾ ಹೆಚ್ಚಳ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ

ಪಾಲಿಕೆ ವ್ಯಾಪ್ತಿಯ 5,482 ಶಾಲೆಗಳು ಮತ್ತು 577 ಪದವಿ ಪೂರ್ವ ಕಾಲೇಜುಗಳ 4.41 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿಯಿದೆ. ಬಿಬಿಎಂಪಿಯಲ್ಲಿ 2,56,800 ಡೋಸ್‌ ಕೋವ್ಯಾಕ್ಸಿನ್‌ ಮತ್ತು 3,70,500 ಡೋಸ್‌ ಕೋವಿಶೀಲ್ಡ್‌ ಸೇರಿದಂತೆ ಒಟ್ಟು 6,27,300 ಡೋಸ್‌ ಲಸಿಕೆಯ ದಾಸ್ತಾನು ಇದೆ. ಹಂತ ಹಂತವಾಗಿ ಮಕ್ಕಳಿಗೆ ಲಸಿಕೆ ನೀಡಲು ಎಲ್ಲ ರೀತಿಯ ಕ್ರಮಕೈಗೊಂಡಿದ್ದೇವೆ. ಮೊದಲ ದಿನ ನಿರೀಕ್ಷಿತ ಗುರಿ ತಲುಪದಿದ್ದರೂ ಶೇ.47 ಗುರಿ ಸಾಧನೆ ಮಾಡಿದ್ದು ಮುಂದಿನ ದಿನಗಳಲ್ಲಿ ಶೇ.100ರಷ್ಟುಸಾಧನೆ ಮಾಡುತ್ತೇವೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದರು.

ಲಸಿಕೆ ಕುರಿತು ಜಾಗೃತಿ:

ಮಕ್ಕಳಿಗೆ ಲಸಿಕೆ ಪಡೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೌನ್ಸೆಲಿಂಗ್‌ ಮೂಲಕ ಅನುಮಾನಗಳನ್ನು ಬಗೆಹರಿಸಲು ಕ್ರಮಕೈಗೊಂಡಿದ್ದೇವೆ. ಲಸಿಕೆ ಪಡೆಯುವ ಮಕ್ಕಳು ಶಾಲಾ ಗುರುತಿನ ಚೀಟಿ ಅಥವಾ ಇತರೆ ಫೋಟೋ ಇರುವ ಗುರುತಿನ ಚೀಟಿ ಬಳಸಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿದ್ದೇವೆ. ಪೋಷಕರ ಅಥವಾ ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಇಲ್ಲದಿದ್ದರೆ ಸಂಸ್ಥೆಯ ಮುಖ್ಯಸ್ಥರ ಮೊಬೈಲ್‌ ಸಂಖ್ಯೆಯನ್ನು ಬಳಸಬಹುದು. 

ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಕೊರೋನಾ ಭಾರಿ ಹೆಚ್ಚಳ, ಹೀಗೆ ಮುಂದುವರಿದ್ರೆ ಲಾಕ್‌ ಫಿಕ್ಸ್!

ಶಾಲೆಯಿಂದ ಹೊರಗುಳಿದ ಫಲಾನುಭವಿಯು ನಗರದಲ್ಲಿರುವ ಎಲ್ಲ ಕೋವಿಡ್‌ ಲಸಿಕಾ ಕೇಂದ್ರದಲ್ಲಿ ಪ್ರತ್ಯೇಕ ಸಾಲಿನಲ್ಲಿ ಲಸಿಕೆ ಪಡೆಯಲು ವ್ಯವಸ್ಥೆ ಮಾಡಿದ್ದೇವೆ. ಅನ್ಯ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಪೋಷಕರ ಒಪ್ಪಿಗೆಯನ್ನು ಪಡೆದುಕೊಂಡಿರಬೇಕು. ಇಂತಹವರು ವೈದ್ಯಕೀಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಆರೋಗ್ಯ ಕೇಂದ್ರದಲ್ಲಿ ಮಾತ್ರ ಲಸಿಕೆ ಪಡೆಯಬೇಕು ಎಂದು ಸೂಚನೆ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಬಿಬಿಎಂಪಿ ಸಹಾಯವಾಣಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ಸಂಬಂಧಿಸಿದ ಮಾಹಿತಿಗಾಗಿ ಎಂಟು ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದೆ. ನಗರದ ಎಲ್ಲ ನಾಗರಿಕರು ಕೋವಿಡ್‌ ಸಂಬಂಧಿಸಿದಂತೆ ಟ್ರಯಾಜಿಂಗ್‌, ಕೋವಿಡ್‌ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲಾಗುವುದು, ಲಸಿಕೆ ಪಡೆಯುವುದು ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ನಿಯಂತ್ರಣ ಕೊಠಡಿಯ ಸಿಬ್ಬಂದಿಯಿಂದ ದಿನದ 24 ಗಂಟೆಯೂ ಪಡೆದುಕೊಳ್ಳಬಹುದು.

ವಲಯ ದೂರವಾಣಿ ಸಂಖ್ಯೆ

ಬೊಮ್ಮನಹಳ್ಳಿ 88846 66670

ದಾಸರಹಳ್ಳಿ 94806 83132

ಪೂರ್ವ 94806 85163

ಮಹದೇವಪುರ 08023010102

ಆರ್‌.ಆರ್‌.ನಗರ 08028601050.

ದಕ್ಷಿಣ 8431816718

ಪಶ್ಚಿಮ 08068248454

ಯಲಹಂಕ 94806 85961

Follow Us:
Download App:
  • android
  • ios