ಇಂಡಿ: ಬಡವರ ಗೋಳು ಕೇಳೋರ‍್ಯಾರು? ಕಂಡೂ ಕಾಣದಂತಿರುವ ಜನಪ್ರತಿನಿಧಿಗಳು
ಬಡವರ ಬದುಕಿಗೆ ಸಿಕ್ಕಿತೇ ಆಸರೆ?| ದಶಕಗಳಿಂದ ಗೋಮಾಳದಲ್ಲೇ ವಾಸ| ಅಕ್ರಮ-ಸಕ್ರಮಕ್ಕೆ ಕಾಯುತ್ತಿರುವ ಕುಟುಂಬಗಳು| ಗಡಿಭಾಗದಲ್ಲಿರುವ ಶಿರನಾಳ ಗ್ರಾಮದ ಸರ್ಕಾರಿ ಗೋಮಾಳ ಜಮೀನದಲ್ಲಿ ಪತ್ರಾಸ ಶೆಡ್ ನಿರ್ಮಿಸಿ ವಾಸಿಸುವ ಕುಟುಂಬಗಳು|
ಖಾಜು ಸಿಂಗೆಗೋಳ
ಇಂಡಿ(ಡಿ.27): ಸುಮಾರು ಹತ್ತು ವರ್ಷದಿಂದ ಇಲ್ಲೊಂದು ಗ್ರಾಮದಲ್ಲಿನ 100 ಕ್ಕೂ ಹೆಚ್ಚು ಬಡ ಕುಟುಂಬಗಳು ಸ್ವಂತ ಜಾಗವಿಲ್ಲದ ಕಾರಣಕ್ಕೆ ಸರ್ಕಾರಿ ಗೋಮಾಳ ಜಮೀನದಲ್ಲಿ ಪತ್ರಾಸ್ ಶೆಡ್‌ನ ಕತ್ತಲಲ್ಲಿ ಕಾಲ ಕಳೆಯುತ್ತ ನರಕಯಾತನೆ ಅನುಭವಿಸುತ್ತಿದ್ದಾರೆ.
ಹೌದು, ಗಡಿಭಾಗದಲ್ಲಿರುವ ಶಿರನಾಳ ಗ್ರಾಮದ ಸುಮಾರು 500ಕ್ಕೂ ಹೆಚ್ಚು ಬಡಜನತೆ ಇಂಥ ಶೋಚನೀಯ ಸ್ಥಿತಿ ಎದುರಿಸುತ್ತಿದ್ದು, ಇವರ ಸಮಸ್ಯೆಗೆ ಪರಿಹಾರ ಒದಗಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.
ಶಿರನಾಳ ಗ್ರಾಮದಲ್ಲಿ ಸುಮಾರು 50 ಎಕರೆಗಿಂತ ಹೆಚ್ಚಿನ ಸರ್ಕಾರಿ ಗೋಮಾಳ ಜಮೀನು ಇದೆ. ಈ ಪ್ರದೇಶದಲ್ಲಿ ಕೆರೆ, ಶಾಲೆ, ಅಂಗನವಾಡಿ, ಸ್ಮಶಾನ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಘಟಕ ಸೇರಿದಂತೆ ಇತರೆ ಕಟ್ಟಡಗಳು, ಸೌಲ್ಯಭ್ಯಗಳು ಇವೆ. ನೂರಾರು ಕುಟುಂಬಗಳು ಹೊಟ್ಟೆಪಾಡಿಗಾಗಿ ದಿನಾಲೂ ಕೂಲಿನಾಲಿ ಮಾಡಿ ಬದುಕಬೇಕು. ಸ್ವಂತ ಮನೆಯಿಲ್ಲದೆ ಪತ್ರಾಸ್ ಶೆಡ್‌ನಲ್ಲಿ ದಶಕಗಳಿಂದ ಕತ್ತಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರಿ ಜಮೀನದಲ್ಲಿ ವಾಸಿಸುವ ಕುಟುಂಬಗಳಿಗೆ ಅಕ್ರಮ-ಸಕ್ರಮದಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಇದ್ದಿರುವುದರಿಂದ ಅಕ್ರಮ-ಸಕ್ರಮದಲ್ಲಿ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಉರುಳಿವೆ. ಸರ್ಕಾರ ಇಂದು ಅಥವಾ ನಾಳೆ ನಮ್ಮ ಕಡೆ ಕಣ್ಣು ತೆರೆಯಬಹುದು ಎಂಬ ಆಶಾಭಾವನೆ ಕುಟುಂಬಗಳದ್ದಾಗಿದೆ.
ಕತ್ತಲಲ್ಲಿ ಮಕ್ಕಳ ವಿದ್ಯಾಭ್ಯಾಸ:
ಸರ್ಕಾರಿ ಗೋಮಾಳದಲ್ಲಿ ವಾಸಿಸುವ ನೂರಾರು ಕುಟುಂಬಗಳು ಸರ್ಕಾರ ಪಡಿತರ ಅಂಗಡಿಗಳ ಮೂಲಕ ತಿಂಗಳಿಗೆ ಕೊಡುವ ಸೀಮೆ ಎಣ್ಣೆಯಲ್ಲೇ ದೀಪ ಹೊತ್ತಿಸಿ ಬದುಕಬೇಕು. ರಾತ್ರಿಯಾದರೆ ಮಕ್ಕಳು ಓದುವ ಹಾಗಿಲ್ಲ. ಸರ್ಕಾರ ಕೊಡುವ ಸೀಮೆ ಎಣ್ಣೆ ತೀರಿದರೆ ಮುಗಿಯುತು. ಮತ್ತೆ ಕತ್ತಲಲ್ಲಿಯೇ ವಿಷ ಜಂತುಗಳ ಭಯದಲ್ಲಿ ರಾತ್ರಿ ಕಳೆಯಬೇಕು. ಈ ಕುಟುಂಬಳು ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲಲ್ಲಿ ಬದುಕಬೇಕು. ಅಲ್ಲದೇ ಈ ಪ್ರದೇಶದಲ್ಲಿ ಬೀದಿ ದೀಪಗಳು ಇರುವುದಿಲ್ಲ. ಕತ್ತಲಾದರೆ ಶೆಡ್‌ನಲ್ಲಿಯೆ ಕಾಲ ಕಳೆಯುವ ದುಸ್ಥಿತಿ ಇದೆ.
ಅಕ್ರಮ-ಸಕ್ರಮ:
ಸರ್ಕಾರಿ ಗೋಮಾಳಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಜಾಗ ಮಂಜೂರಿಗಾಗಿ ಅಕ್ರಮ-ಸಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಿ ಪ್ರತಿಯೊಬ್ಬರೂ ಸ್ವಂತ ಜಾಗಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರ ಗಮನ ಹರಿಸಿ ಬಡಜನರ ಪಾಲಿಗೆ ಬೆಳಕಾಗಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಆ ಕೆಲಸ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಮಾಡದೆ ಇರುವುದು ದುರ್ದೈವದ ಸಂಗತಿ. ಮಳೆ,ಗಾಳಿಯಲ್ಲಿ ಮಕ್ಕಳೊಂದಿಗೆ ಭಯದಲ್ಲಿ ಕಾಲಕಳೆಯಬೇಕು. ಗಾಳಿಯ ರಭಸಕ್ಕೆ ಪತ್ರಾಸ್ ಶೆಡ್ ಹಾರಿಹೋಗುತ್ತೇನೋ ಎಂಬ ಆತಂಕ ಕುಟುಂಬಗಳದ್ದಾಗಿದೆ.
ಸರ್ಕಾರಿ ಜಾಗದಲ್ಲಿ ವಾಸಿಸುವ ಕುಟಂಬಗಳಿಗೆ ಗ್ರಾಮದಲ್ಲಿ ಸ್ವಂತ ಜಾಗ ಇಲ್ಲ. ದಿನನಿತ್ಯ ದುಡಿದು ಬದುಕುವ ಬಡಕುಟುಂಬಗಳು. ಎಲ್ಲರಲ್ಲೂ ಸ್ವಂತ ಮನೆ ಕಟ್ಟಿಕೊಳ್ಳುವ ಕನುಸು ಇರುತ್ತದೆ. ಹತ್ತು ವರ್ಷಗಳಿಂದ ಕತ್ತಲಿನಲ್ಲಿ ವಾಸಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗ ಮಂಜೂರು ಮಾಡಬೇಕು, ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಅಶ್ವೀನಿ ತಳವಾರ (ಶಿರನಾಳ) ಅವರು ಹೇಳಿದ್ದಾರೆ.
ಅನೇಕ ವರ್ಷದಿಂದ ಕುಟುಂಬ ಸಮೇತ ಮಳೆ, ಗಾಳಿಯಲ್ಲಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಈ ಕುಟುಂಬಗಳತ್ತ ಗಮನ ಹರಿಸಬೇಕು. ಬಡವರಿಗೆ ಬೇಗನೆ ಅಕ್ರಮ ಸಕ್ರಮದಡಿಯಲ್ಲಿ ಹಕ್ಕುಪತ್ರ ನೀಡಬೇಕು. ಮೂಲಸೌಲಭ್ಯ ಒದಗಿಸಿಕೊಡಬೇಕು ಎಂದು ಶಿರನಾಳ ಗ್ರಾಮಸ್ಥ ಭೀಮರಾವ ಶಿವಶರಣ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿರನಾಳ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಕೋಳಿ ಅವರು, ಶಿರನಾಳ ಗ್ರಾಮದ ಸರ್ಕಾರಿ ಜಾಗದಲ್ಲಿ ಪತ್ರಾಸ್ ಶೆಡ್ ನಿರ್ಮಿಸಿಕೊಂಡು ವಾಸಿಸುವ ಕುಟುಂಬಗಳಿಂದ ಈಗಾಗಲೇ 140ಕ್ಕೂ ಹೆಚ್ಚು ಅರ್ಜಿ ಅಕ್ರಮ- ಸಕ್ರಮದಡಿ ಅರ್ಜಿ ಸಲ್ಲಿಕೆಯಾಗಿವೆ. ಸರ್ಕಾರದಿಂದ ಇನ್ನೂ ಯಾವ ಆದೇಶ ಬಂದಿಲ್ಲ. ಆದೇಶ ಬಂದ ಮೇಲೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)