ಕೊರೋನಾ ಸಂಕಷ್ಟದಲ್ಲಿದ್ದವರ ನೆರವಿಗೆ ರಕ್ಷಾ ರಾಮಯ್ಯ ಸಿದ್ಧತೆ| ಈ ವೇಳೆ ಗಲಾಟೆ| 15ಕ್ಕೂ ಜನರು ಏಕಾಏಕಿ ಕಚೇರಿಗೆ ನುಗ್ಗಿ ನನ್ನನ್ನು ಗುರಿಯಾಗಿಸಿಕೊಂಡು ಬೈದಿದ್ದಾರೆ. ಅಲ್ಲದೆ, ಹೊಡೆಯುವ ಹಾಗೆ ಕೈ ತೋರಿಸಿ ಏಕ ವಚನದಲ್ಲಿ ನಿಂದನೆ| ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ಭವ್ಯ ಕೆ.ಆರ್‌ ದೂರು| 

ಬೆಂಗಳೂರು(ಏ.24): ಕೊರೋನಾ ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗಲು ಯುವ ಕಾಂಗ್ರೆಸ್‌ ಅಧ್ಯಕ್ಷ ರಕ್ಷಾ ರಾಮಯ್ಯ ಅವರ ನೇತೃತ್ವದಲ್ಲಿ ಸಜ್ಜಾಗುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಶಾಸಕ ಎನ್‌.ಎ. ಹ್ಯಾರೀಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹಾಗೂ ಆತನ ಸಂಗಡಿಗರು ದಬ್ಬಾಳಿಕೆ ನಡೆಸಿದ ಘಟನೆ ನಡೆಸಿದೆ. ಈ ಬಗ್ಗೆ ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ಭವ್ಯ ಕೆ.ಆರ್‌. ಎಂಬುವವರು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕೊರೋನಾದಿಂದ ಸಂಕಷ್ಟದಲ್ಲಿರುವವರಿಗೆ ಸೂಕ್ತ ಚಿಕಿತ್ಸೆಗಾಗಿ ಯುವ ಕಾಂಗ್ರೆಸ್‌ ಕಚೇರಿಯಲ್ಲಿ ಸಿದ್ಧತೆ ನಡೆಸುತ್ತಿದ್ದ ವೇಳೆ ಮೊಹಮ್ಮದ್‌ ನಲಪಾಡ್‌ ಹಾಗೂ 15ಕ್ಕೂ ಅವರ ಬೆಂಬಲಿಗರು ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಘಟನೆ ಏ.21ರಂದು ಮಧ್ಯಾಹ್ನ ಸುಮಾರು 3.45ರ ವೇಳೆಗೆ ನಡೆದಿದೆ.

ಯುವ ಘಟಕದ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಯುವ ಕಾಂಗ್ರೆಸ್‌ ಕಚೇರಿಯಲ್ಲಿ ಕೊರೋನಾನಿಂದ ಬಳಲುತ್ತಿರುವವರಿಗೆ ಸೂಕ್ತ ಆಸ್ಪತ್ರೆ, ಔಷಧಿ, ಪ್ಲಾಸ್ಮಾ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವೇಳೆ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಮಗ ಮೊಹಮ್ಮದ್‌ ನಲಪಾಡ್‌ ಹಾಗೂ ಭಾಸ್ಕರ್‌, ಗೋವರ್ಧನ್‌, ಆಗಸ್ಮೀನ್‌ ಸೇರಿದಂತೆ 15ಕ್ಕೂ ಜನರು ಏಕಾಏಕಿ ಕಚೇರಿಗೆ ನುಗ್ಗಿ ನನ್ನನ್ನು ಗುರಿಯಾಗಿಸಿಕೊಂಡು ಬೈದಿದ್ದಾರೆ. ಅಲ್ಲದೆ, ಹೊಡೆಯುವ ಹಾಗೆ ಕೈ ತೋರಿಸಿ ಏಕ ವಚನದಲ್ಲಿ ನಿಂದಿಸಿ ಹೋಗಿದ್ದಾರೆ.

ಮೊಹಮ್ಮದ್ ನಲಪಾಡ್ ಮತ್ತೊಂದು ಕಿತಾಪತಿ: ಮತ್ತೆ ಬೇಕಾ ಜೈಲಿಗೆ ಹೋಗೋ ಗತಿ..!

ಇದಾದ ಅರ್ಧ ಗಂಟೆಯ ನಂತರ ಯಾರೋ 5 ಜನರು ಬಂದು ‘ನಮ್ಮ ಬಾಸ್‌ ನಲಪಾಡ್‌ ಅವರ ತಂಟೆಗೆ ಬಂದರೆ ನಾವು ನಿಮ್ಮನ್ನು ಕೆಲಸ ಮಾಡಲು ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದರು. ಇದೇ ರೀತಿ ಬಸವಕಲ್ಯಾಣ ಉಪ ಚುನಾವಣೆ ಪ್ರಚಾರಕ್ಕೆ ಹೋಗಿದ್ದ ವೇಳೆಯೂ ತೊಂದರೆ ನೀಡಿದ್ದಾರೆ. ಆದ್ದರಿಂದ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ಸೂಕ್ತ ಬಂದೋಬಸ್ತ್‌ ಮಾಡಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವವರಿಗೆ ನೆರವು

ರಾಜ್ಯದಲ್ಲಿ ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಸೂಕ್ತ ನೆರವು, ನೊಂದವರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಯುವ ಕಾಂಗ್ರೆಸ್‌ ತಂಡ ತೀವ್ರ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ.

ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ರಕ್ಷಾ ರಾಮಯ್ಯ ನೇತೃತ್ವದಲ್ಲಿ ಕೊರೋನಾ ಪರೀಕ್ಷಾ ಕೇಂದ್ರ, ಕೊರೋನಾ ಸೋಂಕಿನ ಲಕ್ಷಣಗಳ ಕುರಿತು ವೈದ್ಯಕೀಯ ಸಲಹೆ, ಬಿಬಿಎಂಪಿ ಆ್ಯಂಬುಲೆನ್ಸ್‌ ಸೌಲಭ್ಯ, ಗೃಹ ವಾಸ್ತವ್ಯಕ್ಕೆ ಹೋಮ್‌ ಐಸೋಲೇಷನ್‌ ಸಂಬಂಧಿಸಿದಂತೆ ನೆರವು ನೀಡುವ ಕೆಲಸವನ್ನು ಯುವ ತಂಡ ಮಾಡುತ್ತಿದೆ.

ಇದಕ್ಕೆ ನೆರವು ನೀಡುವವರು ಹಾಗೂ ಸಹಾಯ ಅವಶ್ಯಕತೆ ಇರುವವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಟ್ವಿಟರ್‌ https://twitter.com/YCKarnataka ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಫೇಸ್‌ಬುಕ್‌ https://www.facebook.com/YCKar ಸಂಪರ್ಕಿಸಬಹುದು ಎಂದು ತಿಳಿಸಿದೆ.