Karnataka Assembly Elections 2023: ಚುನಾವಣಾ ಅಕ್ರಮ ತಡೆಗೆ ಮೊಬೈಲ್‌ ಸ್ಕ್ವಾಡ್‌

ಬೆಂಗಳೂರು ನಗರದ ಪ್ರತಿ ಕ್ಷೇತ್ರದಲ್ಲೂ ಸ್ಕ್ವಾಡ್‌ ನಿಯೋಜನೆ, ಮತದಾರರಿಗೆ ಆಮಿಷ ಒಡ್ಡಿದರೆ, ಉಡುಗೊರೆ ನೀಡಿದರೆ ತಕ್ಷಣ ಸೀಜ್‌, ಸ್ಥಳದಲ್ಲೇ ಬಂಧನ. 

Mobile Squad to Prevent Election Irregularities in Bengaluru grg

ಗಿರೀಶ್‌ ಗರಗ

ಬೆಂಗಳೂರು(ಏ.28):  ಮತದಾರರನ್ನು ಸೆಳೆಯಲು ಉಡುಗೊರೆಗಳನ್ನು ನೀಡುತ್ತಾ ನೀತಿ ಸಂಹಿತೆ ಉಲ್ಲಂಘಿಸುವ ಅಭ್ಯರ್ಥಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಜಿಲ್ಲಾ ಚುನಾವಣಾ ವಿಭಾಗ ವಿಧಾನಸಭಾ ಕ್ಷೇತ್ರಕ್ಕೊಂದು ಮೊಬೈಲ್‌ ಸ್ಕ್ವಾಡ್‌ನ್ನು ನಿಯೋಜಿಸಿದೆ.

ಮತದಾನದ ದಿನ ಹತ್ತಿರಾಗುತ್ತಿದ್ದಂತೆ ಮತದಾರರನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ಸೀರೆ, ಕುಕ್ಕರ್‌, ಬೆಳ್ಳಿ ವಸ್ತುಗಳು ಹೀಗೆ ಹಲವು ಉಡುಗೊರೆಗಳನ್ನು ನೀಡುತ್ತಿವೆ. ಹೀಗೆ ಉಡುಗೊರೆ ನೀಡುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಅದನ್ನು ತಡೆಯಲು ಬೆಂಗಳೂರು ನಗರ ಜಿಲ್ಲಾ ಚುನಾವಣಾ ವಿಭಾಗದಿಂದ ಫ್ಲೈಯಿಂಗ್‌ ಸ್ಕ್ವಾಡ್‌ ಸೇರಿ ಇನ್ನಿತರ ತಂಡಗಳನ್ನು ರಚಿಸಲಾಗಿದೆ. ಅದರ ಜತೆಗೆ ಇದೇ ಮೊದಲ ಬಾರಿ ನೀತಿ ಸಂಹಿತೆ ಉಲ್ಲಂಘಿಸುತ್ತಿರುವವರನ್ನು ಸ್ಥಳದಲ್ಲಿಯೇ ಬಂಧಿಸಲು ಆದೇಶ ಹೊರಡಿಸಲು ಮ್ಯಾಜಿಸ್ಪ್ರೇಟ್‌ ಅಧಿಕಾರವನ್ನು ಹೊಂದಿರುವ ಅಧಿಕಾರಿಯನ್ನು ಒಳಗೊಂಡ ಮೊಬೈಲ್‌ ಸ್ಕ್ವಾಡ್‌ ರಚಿಸಲಾಗಿದೆ.

Karnataka Assembly Elections 2023: ಜನರ ಸೆಳೆಯಲು ಯುವ, ಹಸಿರು ಮತಗಟ್ಟೆ..!

28 ಕ್ಷೇತ್ರದಲ್ಲೂ ಕಾರ್ಯ ನಿರ್ವಹಣೆ:

ಚುನಾವಣಾ ವಿಭಾಗವು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಕ್ಕೂ ತಲಾ ಒಂದು ಮೊಬೈಲ್‌ ಸ್ಕ್ವಾಡ್‌ ರಚಿಸಿದೆ. ಆ ಸ್ಕ್ವಾಡ್‌ನಲ್ಲಿ 4ರಿಂದ 5 ಮಂದಿ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಒಬ್ಬರು ಮ್ಯಾಜಿಸ್ಪ್ರೇಟ್‌ ಅಧಿಕಾರವನ್ನು ಹೊಂದಿರುವ ಅಧಿಕಾರಿಯಾಗಿರಲಿದ್ದಾರೆ. ಅವರು ಅನುಮಾನ ಬಂದ ಹಾಗೂ ದೂರು ಬಂದ ಸ್ಥಳಗಳಿಗೆ ತೆರಳಿ ಅಲ್ಲಿ ಪರಿಶೀಲನೆ ನಡೆಸಲು ಸ್ಥಳದಲ್ಲೇ ಸರ್ಚ್‌ ವಾರೆಂಟ್‌ ನೀಡುವುದು, ನೀತಿ ಸಂಹಿತೆ ಉಲ್ಲಂಘಿಸಿದ್ದು ದೃಢಪಟ್ಟರೆ ತಪ್ಪು ಮಾಡಿರುವವರನ್ನು ಬಂಧಿಸಲು ಆದೇಶ ಹೊರಡಿಸುವ ಅಧಿಕಾರವನ್ನು ಹೊಂದಿದ್ದಾರೆ.

ಅವರ ಜತೆಗೆ ಒಬ್ಬರು ಪುರುಷ ಮತ್ತು ಒಬ್ಬರು ಮಹಿಳಾ ಪೊಲೀಸ್‌ ಸಿಬ್ಬಂದಿ ಇರಲಿದ್ದಾರೆ. ಜತೆಗೆ ಚಿತ್ರೀಕರಣ ಮಾಡಲು ಕ್ಯಾಮರಾಮೆನ್‌ ಹಾಗೂ ದೊಡ್ಡ ಮಟ್ಟದ ವಸ್ತುಗಳು ಪತ್ತೆಯಾದರೆ ಅದರ ಬಗ್ಗೆ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸೇರಿ ಇನ್ನಿತರರಿಗೆ ಮಾಹಿತಿ ನೀಡಲು ನೋಡಲ್‌ ಅಧಿಕಾರಿ ಮೊಬೈಲ್‌ ಸ್ಕ್ವಾಡ್‌ ತಂಡದಲ್ಲಿದ್ದಾರೆ.

ವಾಣಿಜ್ಯ ಸ್ಥಳಗಳ ಗುರುತು

ಚುನಾವಣಾ ವಿಭಾಗದ ಅಧಿಕಾರಿಗಳು ಎಲ್ಲ 28 ಕ್ಷೇತ್ರ ವ್ಯಾಪ್ತಿಯಲ್ಲಿ ಯಾವೆಲ್ಲ ಸ್ಥಳಗಳು ಖರ್ಚು-ವೆಚ್ಚ ಸೂಕ್ಷ್ಮ ಪ್ರದೇಶಗಳು ಎಂಬುದನ್ನು ಗುರುತಿಸಿದ್ದಾರೆ. ಅದರಲ್ಲಿ ವಾಣಿಜ್ಯ ಪ್ರದೇಶಗಳನ್ನು ಗುರುತಿಸಿ ಅಲ್ಲಿ ನಡೆಯುವ ವಹಿವಾಟಿನ ಮೇಲೆ ನಿಗಾವಹಿಸಲಾಗಿದೆ. ಪ್ರಮುಖವಾಗಿ ಬಟ್ಟೆಮಳಿಗೆಗಳು, ಚಿನ್ನಾಭರಣ ಮಳಿಗೆ ಹೀಗೆ ವಿವಿಧ ಸ್ಥಳಗಳನ್ನು ನಿಗಾವಣೆಯಲ್ಲಿರಿಸಲಾಗಿದೆ. ಅಲ್ಲದೆ, ಆ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅನುಮಾನಾಸ್ಪದವಾಗಿ ಅತೀ ಹೆಚ್ಚಿನ ವಸ್ತುಗಳನ್ನು ಖರೀದಿಸಿರುವುದು ಕಂಡು ಬಂದರೆ ಅದರ ಬಗ್ಗೆ ಕೂಡಲೆ ಮೊಬೈಲ್‌ ಸ್ಕ್ವಾಡ್‌ಗೆ ಮಾಹಿತಿ ನೀಡಲಾಗುತ್ತದೆ. ಅವರು ಸ್ಥಳಕ್ಕೆ ಬಂದು ವಸ್ತುಗಳ ಖರೀದಿಯನ್ನು ಪರಿಶೀಲಿಸಲಿದ್ದಾರೆ. ಮತದಾರರಿಗೆ ಹಂಚಲು ವಸ್ತುಗಳನ್ನು ಖರೀದಿಸಲಾಗಿದೆ ಎಂಬ ಅನುಮಾನ ಬಂದರೆ ಅವುಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗುತ್ತದೆ.

ಬೆಂಗ್ಳೂರಲ್ಲಿ ಈ ಬಾರಿ 75% ಮತದಾನ ಗುರಿ: ತುಷಾರ್‌ ಗಿರಿನಾಥ್‌

ಉಡುಗೊರೆ ಹಂಚದಂತೆ ನಿಗಾ

ಮತದಾರರಿಗೆ ಉಡುಗೊರೆ ಹಂಚುವುದನ್ನು ತಡೆಯಲು ಕೊಳಗೇರಿ, ಒಂದೇ ಸಮುದಾಯಕ್ಕೆ ಸೇರಿದವರು ಹೆಚ್ಚಾಗಿ ಇರುವ ವಸತಿ ಪ್ರದೇಶಗಳ ಮೇಲೂ ಚುನಾವಣಾ ವಿಭಾಗ ನೇಮಿಸಿರುವ ಮೊಬೈಲ್‌ ಸ್ಕ್ವಾಡ್‌ ನಿಗಾವಹಿಸಿದೆ. ಅಲ್ಲಿಯೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲಿ, ಯಾವುದಾದರೂ ರಾಜಕೀಯ ಪಕ್ಷದ ಮುಖಂಡರು ಬಂದರೆ ಅವರು ಯಾವುದಾದರು ಉಡುಗೊರೆಯನ್ನು ಮತದಾರರಿಗೆ ನೀಡಲಾಗುತ್ತಿದ್ದಾಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಮೊಬೈಲ್‌ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ ಮ್ಯಾಜಿಸ್ಪ್ರೇಟ್‌ ಅಧಿಕಾರ ಹೊಂದಿರುವ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಅಕ್ರಮ ಎಸಗುವವರನ್ನು ಕೂಡಲೆ ಬಂಧಿಸುವಂತೆ ಅವರು ಆದೇಶಿಸಲಿದ್ದಾರೆ. ಅದರ ಜತೆಗೆ ವಾಣಿಜ್ಯ ಪ್ರದೇಶಗಳು, ವಿವಿಧ ವಸತಿ ಪ್ರದೇಶಗಳ ಮೇಲೆ ನಿಗಾವಹಿಸಲಾಗಿದೆ ಅಂತ ನಗರ ಜಿಲ್ಲಾ ದೂರುಗಳ ಮೇಲ್ವಿಚಾರಣಾ ಕೋಶ ನೋಡಲ್‌ ಅಧಿಕಾರಿ ಪ್ರತೀಕ್‌ ಬಾಯಲ್‌ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios