ಹುಬ್ಬಳ್ಳಿ (ಜ.18):  ರಾತ್ರಿ ವೇಳೆ ಮನೆಗೆ ಬೆಂಕಿ ಬಿದ್ದಿದ್ದು, ಈ ವೇಳೆ ಬಂದ ಮೊಬೈಲ್‌ ಕರೆಯೊಂದು 11 ಜನರ ಪ್ರಾಣ ಉಳಿಸಿದ ಘಟನೆ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ. ಶನಿವಾರ ಮಧ್ಯರಾತ್ರಿ ಬೆಂಕಿಗೆ ಆಹುತಿಯಾಗಿದೆ. ಗ್ರಾಮದ ಸಿದ್ದರಾಮ ವಾಲಿ ಹಾಗೂ ಕಲ್ಲಪ್ಪ ವಾಲಿ ಎಂಬವರ ಎರಡು ಕುಟುಂಬಗಳು ವಾಸವಾಗಿದ್ದ ಮನೆ ಭಸ್ಮಗೊಂಡಿದೆ.

ಸಿದ್ದರಾಮ ವಾಲಿ ಮಾತನಾಡಿ, ‘ಬೆಂಕಿ ಆವರಿಸುವ ವೇಳೆ ಮನೆಯಲ್ಲಿ ಎರಡೂ ಕುಟುಂಬದ ಐದು ಮಕ್ಕಳು ಸೇರಿ ಹನ್ನೊಂದು ಜನರು ನಿದ್ರಿಸಿದ್ದೆವು. ಕಲ್ಲಪ್ಪ ಅವರ ಮನೆಯಲ್ಲಿದ್ದ ಲಕ್ಷ್ಮಿಗೆ ಅವರ ಪತಿ ಗಂಗಾವತಿಯಲ್ಲಿರುವ ನಾಗರಾಜ ಕರೆ ಮಾಡಿದ್ದಾರೆ. ಇದರಿಂದ ಎಚ್ಚರಗೊಂಡ ನಂದಿತಾ, ದಟ್ಟಹೊಗೆ ಆವರಿಸಿದ್ದನ್ನು ಕಂಡು ಕಂಗಾಲಾಗಿ ಎಲ್ಲರನ್ನೂ ಎಬ್ಬಿಸಿದರು. ಭಯಗೊಂಡು ಎಲ್ಲರೂ ಮನೆಯಿಂದ ಹೊರಗೋಡಿ ಬಂದೆವು. ಮಾವ ಮಾಡಿದ ಕರೆಯಿಂದ ಜೀವ ಉಳಿಸಿಕೊಂಡೆವು’ ಎಂದರು.

‘ಬೆಂಕಿ ಹೊತ್ತಿಕೊಳ್ಳಲು ಶಾರ್ಟ್‌ ಸಕ್ರ್ಯೂಟ್‌ ಕಾರಣ. ಮನೆಗಳಲ್ಲಿದ್ದ ಪರಿಕರಗಳು, ನಗದು, ಆಭರಣ ಎಲ್ಲವೂ ಸೇರಿ ಸುಮಾರು .50 ಲಕ್ಷ ನಷ್ಟವಾಗಿದೆ. ರಾತ್ರಿ 11.30ರಿಂದ ಒಂದು ಗಂಟೆಗಳ ಕಾಲ ಮನೆಗಳೆರಡೂ ಹೊತ್ತಿ ಉರಿದಿದ್ದು, ಗ್ರಾಮಸ್ಥರು, ಅಗ್ನಿಶಾಮಕ ದಳದವರು ಪ್ರಯತ್ನಿಸಿದರೂ ಬೆಂಕಿ ಹತೋಟಿ ಸಾಧ್ಯವಾಗದೆ ಎಲ್ಲವೂ ಸುಟ್ಟು ಕರಕಲಾಯಿತು’ ಎಂದು ಮನೆಯವರು ತಿಳಿಸಿದ್ದಾರೆ.