ಬಾಗಲಕೋಟೆ(ಡಿ.26): ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತದೆ ಎಂಬಂತೆ ಸದ್ಯದ ಬಿಜೆಪಿ ಸ್ಥಿತಿ ದೇಶದಲ್ಲಿ ಇದೆ ಎಂದು ವ್ಯಂಗ್ಯವಾಡಿರುವ ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಪೌರತ್ವ ತಿದ್ದುಪಡಿ ಮಸೂದೆ ಜಾರಿ ಬಂದ ನಂತರವೇ ಜಾರ್ಖಂಡ್‌ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿಜೆಪಿ ಇನ್ನಾದರೂ ಬುದ್ಧಿ ಕಲಿಯಲಿ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮದೆ ಪಕ್ಷದ ಅ​ಧಿಕಾರದಲ್ಲಿದ್ದ ಜಾರ್ಖಂಡ್‌ ಚುನಾವಣೆ ಪೌರತ್ವ ತಿದ್ದುಪಡಿ ಮಸೂದೆ ಜಾರಿ ನಂತರ ಮೊದಲ ಚುನಾವಣೆಯಾಗಿತ್ತು. ಅಲ್ಲಿ ಸೋಲನುಭವಿಸಿರುವ ಕುರಿತು ವಿಶ್ಲೇಷಿಸಿದ ಅವರು, ದೇಶದಲ್ಲಿ ಬಿಜೆಪಿ ಚಾಣಕ್ಯ ಅಮಿತ್‌ ಶಾ ನೇತೃತ್ವದಲ್ಲಿನ ಚುನಾವಣೆಗಳಲ್ಲಿ ಸರಣಿ ಸೋಲು ಆರಂಭವಾಗಿದ್ದು 12 ತಿಂಗಳಲ್ಲಿ 5 ರಾಜ್ಯಗಳಲ್ಲಿ ಅಧಿ​ಕಾರ ಕಳೆದುಕೊಂಡಿರುವುದೇ ಸಾಕ್ಷಿ ಎಂದು ಹೇಳಿದರು.
ಮುಂದೆ ಬರುವ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಸೋಲು ಖಚಿತ. ಚಾಣಕ್ಯನ ಸ್ಥಿತಿ ನೋಡಿ ಮರುಕ ಬರುತ್ತಿದೆ. ಒಬ್ಬ ಮನುಷ್ಯ ಸ್ವಲ್ಪ ಸಮಯದವರೆಗೆ ಮಾತ್ರ ಮೋಸ ಮಾಡಲು ಸಾಧ್ಯ. ಇದು ಮೋದಿ ಅವರಿಗೂ ಅನ್ವಯಿಸುತ್ತದೆ ಎಂದರು.

ಕಾರಜೋಳ ಕ್ಷಮೆ ಕೇಳಲಿ:

ಪೌರತ್ವ ಕಾಯ್ದೆ ವಿರೋಧದ ವಿಷಯದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾಂಗ್ರೆಸ್ಸಿಗರನ್ನು ದೇಶದ್ರೋಹಿಗಳು ಎಂದಿದ್ದಾರೆ.

ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ವಿಷಯವಲ್ಲ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್‌ ಪಕ್ಷ ಆರೂವರೆ ಲಕ್ಷ ಜನತೆ ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿ ಹುಟ್ಟಿದ್ದೆ 1950ರಲ್ಲಿ. ಕಾರಜೋಳ ತಮ್ಮ ಪಕ್ಷದ ಇತಿಹಾಸ ನೋಡಿಕೊಂಡು ಮಾತನಾಡಲಿ. ತಕ್ಷಣವೇ ಕಾರಜೋಳ ಕಾಂಗ್ರೆಸಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.