'ಅಮಿತ್ ಶಾ, ನರೇಂದ್ರ ಮೋದಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ'
ಸಂವಿಧಾನ ತೆಗೆದು ಎಲ್ಲರನ್ನೂ ಶೂದ್ರರನ್ನಾಗಿಸಲು ಹುನ್ನಾರ| ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದ ಜನಜಾಗೃತಿ ಆಂದೋಲನ ಕಾರ್ಯಕ್ರಮ| ಎನ್‌ಆರ್‌ಸಿ ಕಾಯ್ದೆಯಿಂದ ಮುಸ್ಲಿಮರಿಗೆ ಅಷ್ಟೆ ಅಲ್ಲ, ದಲಿತ, ಹಿಂದುಳಿದ ಜನರಿಗೆ ತೊಂದರೆ|
ಇಂಡಿ(ಫೆ.10): ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಹಿಟ್ಲರ್ ತತ್ವ ಅನುಸರಿಸುತ್ತಿದ್ದಾರೆ. ಇಡೀ ದೇಶ ಪ್ರಜಾಪ್ರಭುತ್ವ ಆಡಳಿತವಾಗದೆ, ಇಬ್ಬರ ಆಡಳಿತವಾಗಿದೆ. ಸಂವಿಧಾನ ಉಳಿವಿಗಾಗಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ನನಗೆ ಗುಂಡು ಹಾಕಿದರೂ ನನ್ನ ಹೋರಾಟ ಬೀಡುವುದಿಲ್ಲ. ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯತ್ತದೆ. ಈ ಹೋರಾಟದಿಂದ ಜೈಲು ಸೇರಿದರೂ ಚಿಂತೆಯಿಲ್ಲ, ನನಗೆ ಜೈಲು ಹೊಸತೇನಲ್ಲ. ಸಂವಿಧಾನ ತೆಗೆದು ಎಲ್ಲರನ್ನೂ ಶೂದ್ರರನ್ನಾಗಿಸುವ ಹುನ್ನಾರ ದೇಶದಲ್ಲಿ ನಡೆದಿದೆ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.
ಅವರು ಶನಿವಾರ ಅಂಜುಮನ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಿದ ಪೌರತ್ವ ಕಾಯ್ದೆ ವಿರೋಧ ಹಾಗೂ ಸಂವಿಧಾನ ಉಳಿವಿಗಾಗಿ ಜನ ಜಾಗೃತಿ ಜನಾಂದೋಲನ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್‌ಆರ್‌ಸಿ ಕಾಯ್ದೆಯಿಂದ ಮುಸ್ಲಿಮರಿಗೆ ಅಷ್ಟೆ ತೊಂದರೆ ಅಲ್ಲ, ದಲಿತ, ಹಿಂದುಳಿದ ಜನರಿಗೆ ತೊಂದರೆಯಾಗಲಿದೆ. ಮೀಸಲಾತಿ ಪಡೆಯುವ ದಲಿತ, ಹಿಂದುಳಿದವರಿಗೆ ಅನ್ಯಾಯವಾಗುತ್ತದೆ. ಸಂಸದ ರಮೇಶ ಜಿಗಜಿಣಗಿ, ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಎಲ್ಲರೂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದರು.
'ನನಗೆ ಗುಂಡು ಹಾಕಿದ್ರೂ ಚಿಂತೆಯಿಲ್ಲ CAA ವಿರುದ್ಧ ಹೋರಾಟ ನಿಲ್ಲದು'
ದೇಶದಲ್ಲಿ ಹಲವು ಜನರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಅಂತವರ ಸಮಸ್ಯೆಗಳ ಬಗ್ಗೆ ಅಂಕಿ ಅಂಶ ಸಂಗ್ರಹಿಸುವುದನ್ನು ಬಿಟ್ಟು, ಎನ್‌ಆರ್‌ಸಿ, ಎಂಪಿಆರ್ ಇಂತಹ ಹೆದರಿಸುವಂತ ಹಾವುಗಳನ್ನು ಬಿಟ್ಟು ದೇಶದಲ್ಲಿ ಆಂತರಿಕ ಗಲಭೆಯನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಪೌರತ್ವ ಕಾಯ್ದೆ ಮಾಡುವಾಗ ಬಹುಸಂಖ್ಯಾತ ಜನರಿಂದ ಮಾಹಿತಿ ಪಡೆಯಬೇಕಾಗಿರುವದು ರಾಜಧರ್ಮ. ನಮ್ಮ ಪೂರ್ವಜರು ದೇಶದ ಅಖಂಡತೆಯನ್ನು ಒತ್ತಿ ಹೇಳಿದ್ದಾರೆ. ಆದರೆ ಇಂದು ದೇಶದ ಅಖಂಡತೆಗೆ ಧಕ್ಕೆಯಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನರು ನೀಡಿದ ಅವಕಾಶ ಸರಿಯಾಗಿ ಬಳಸಿಕೊಂಡು ದೇಶದ ಆರ್ಥಿಕತೆ ವ್ಯವಸ್ಥೆ ಹೆಚ್ಚಿಸಬೇಕು. ಈ ಹಿಂದೆ ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೋದಿ ಅವರನ್ನು ರಾಜಧರ್ಮ ಪಾಲಿಸುವಂತೆ ಸಲಹೆ ನೀಡಿರವುದು ನೆನಪಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಮಕ್ಬುಲ್ ಬಾಗವಾನ, ಸೋಮು ಮ್ಯಾಕೇರಿ, ಮೌಲಾನಾ ಶಾಹಾಜೂದಿನ ಖಾಸ್ಮೀ ಮಾತನಾಡಿದರು. ಹಾಸಿಂಪೀರ ವಾಲಿಕಾರ, ಅಯೂಬ ಬಾಗವಾನ, ಸಾಂಬಾಜಿ ಮಿಸಾಳೆ, ಬಿ.ಎಂ. ಕೊರೆ, ಸುಭಾಷ ಕಲ್ಲೂರ, ಶ್ರೀಕಾಂತ ಕುಡಿಗನೂರ, ಅಣ್ಣಾರಾಯ ಬಿದರಕೋಟಿ, ಜಟ್ಟೆಪ್ಪ ರವಳಿ, ತಮಣ್ಣ ಪೂಜಾರಿ, ಪ್ರಶಾಂತ ಕಾಳೆ, ಮುತ್ತಪ್ಪ ಪೋತೆ, ಭೀಮಾಶಂಕರ ಮೂರಮನ್, ನಾಗೇಶ ಶಿವಶರಣ, ರಮೇಶ ಗುತ್ತೆದಾರ, ಅಂತು ಜೈನ, ಶೇಖರ ನಾಯಕ, ಭೀಮಣ್ಣ ಕೌಲಗಿ, ರಮೇಶ ನಾಯಕ, ಸದಾಶಿವ ಪ್ಯಾಟಿ, ಧರ್ಮು ವಾಲಿಕಾರ, ಇಲಿಯಾಸ ಬೋರಾಮಣಿ, ಜಾವೀದ ಮೋಮಿನ, ಅವಿನಾಶ ಬಗಲಿ ಅನೇಕರಿದ್ದರು.