ಬಳ್ಳಾರಿ(ಡಿ.03): ಬಳ್ಳಾರಿ ವಿಭಜನೆ ಮಾಡಲು ಬಿಡುವುದಿಲ್ಲ. ಈ ಸಂಬಂಧ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಸಹ ನಾನು ಸಿದ್ಧನಿದ್ದೇನೆ ಎಂದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದ್ದಾರೆ. 

ನಗರದ ಬಿಡಿಎ ಸಭಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು,  ಬಳ್ಳಾರಿ ಜನರು ಪ್ರತ್ಯೇಕ ಜಿಲ್ಲೆಯನ್ನು ವಿರೋಧಿಸುತ್ತಿದ್ದಾರೆ. ಹೀಗಾಗಿ ಅವರ ಪರವಾಗಿ ನಾನು ನಿಂತಿದ್ದೇನೆ. ಜನರು ಕೂಡಲೇ ರಾಜೀನಾಮೆ ನೀಡಿ ಎಂದರೆ ಕ್ಷಣಾರ್ಧದಲ್ಲಿ ರಾಜಿನಾಮೆ ನೀಡುತ್ತೇನೆ. ಜನರಿಂದ ಆಯ್ಕೆಯಾಗಿದ್ದೇನೆ. ಜನ ಏನು ಹೇಳುತ್ತಾರೋ ಅದನ್ನು ನಾನು ಕೇಳುತ್ತೇನೆ ಎಂದರು.

ಜಿಲ್ಲೆ ವಿಭಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲ ಇದ್ದೇ ಇದೆ. ಹೋರಾಟ ಸಮಿತಿಯವರು ಆಕ್ಷೇಪಣೆ ಅರ್ಜಿ ಸಲ್ಲಿಸುತ್ತಿದ್ದಾರೆ. ನ್ಯಾಯಾಂಗ ಹೋರಾಟ ಮಾಡಲು ಸಹ ನಾವು ಸಿದ್ಧರಿದ್ದೇವೆ. ಈ ಸಂಬಂಧ ಹೋರಾಟಗಾರರ ಜತೆ ಮಾತನಾಡಿ, ಮುಂದಿನ ಹಂತದ ನಿರ್ಧಾರ ಕೈಗೊಳ್ಳುತ್ತೇವೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಜನರು ನ್ಯಾಯಾಂಗ ಮೊರೆ ಹೋಗಲು ನಿರ್ಧರಿಸಿದ್ದಾರೆ. ಅವರ ಬೆಂಬಲವಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ಪಕ್ಷದಲ್ಲಿದ್ದುಕೊಂಡು ನೇರವಾಗಿ ಹೋರಾಟದಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಹಿಂದೆ ನಿಂತು ಬೆಂಬಲ ನೀಡಬೇಕು ಎಂದು ಅನೇಕರು ಸಲಹೆ ನೀಡಿದ್ದಾರೆ. ಅದೇ ರೀತಿ ನೇರವಾಗಿ ಹೋರಾಟದಲ್ಲಿ ಪಾಲ್ಗೊಳ್ಳದೆ ನನ್ನ ಜಿಲ್ಲೆ ವಿಭಜನೆಯಾಗದಂತೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನಿಜಕ್ಕೂ ಜಿಲ್ಲೆಯನ್ನು ತುಂಡು ಮಾಡುತ್ತಿರುವ ಬಗ್ಗೆ ವೈಯಕ್ತಿಕವಾಗಿ ನನಗೆ ನೋವಾಗಿದೆ. ಆನಂದಸಿಂಗ್‌ ಅವರನ್ನು ಸಹ ನಾನು ಮನವಿ ಮಾಡಿಕೊಂಡಿದ್ದೇನೆ. ಜಿಲ್ಲೆಯನ್ನು ಇಬ್ಭಾಗ ಮಾಡುವುದು ಬೇಡ. ಬೇಕಾದರೆ ಹೊಸಪೇಟೆ ಜಿಲ್ಲಾ ಕೇಂದ್ರವನ್ನಾಗಿಸಿಕೊಳ್ಳಿ ಎಂದು ಕೇಳಿದ್ದೇನೆ. ಪಶ್ಚಿಮ ತಾಲೂಕುಗಳ ಜನರಿಗೆ ಸಹ ಹೊಸಪೇಟೆ ದೂರವಾಗುತ್ತದೆ. ಅನೇಕರು ಫೋನ್‌ ಮಾಡಿ ಹೇಳುತ್ತಿದ್ದಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದರು.

ಬಳ್ಳಾರಿ: ಡೋಲು ಬಡಿದು ಸಂಭ್ರಮಿಸಿದ ಶಾಸಕ ಸೋಮಶೇಖರ ರೆಡ್ಡಿ

ಮೊಳಕಾಲ್ಮೂರು ಬಳ್ಳಾರಿಗೆ ಬೇಡ:

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವುದು ಬೇಡ ಎಂದು ಶ್ರೀರಾಮುಲು ಅವರಿಗೆ ಮನವಿ ಮಾಡುತ್ತೇನೆ. ಈಗಾಗಲೇ ಜಿಲ್ಲೆ ಇಬ್ಭಾಗವಾಗುತ್ತಿದೆ ಎಂದು ನಾವು ಆತಂಕದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಮೊಳಕಾಲ್ಮೂರು ಸೇರಿಸುತ್ತೇವೆ ಎಂಬುದು ಎಷ್ಟು ಸರಿ? ಈ ಕುರಿತು ಸಚಿವ ಶ್ರೀರಾಮುಲು ಅವರ ಜತೆ ಮಾತನಾಡಿ, ಖಂಡಿತ ಅವರ ಮನವೊಲಿಸುತ್ತೇನೆ ಎಂದು ಹೇಳಿದರಲ್ಲದೆ, ಮೊಳಕಾಲ್ಮುರು ಸೇರ್ಪಡೆಯಾದರೆ ಈ ಭಾಗದ ಯುವಕರಿಗೆ 371(ಜೆ) ಸೌಲಭ್ಯದ ಕಡಿತವಾಗುತ್ತದೆ. ಇದನ್ನು ಒಪ್ಪಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕನ್ನಡಪರ ಸಂಘಟನೆಗಳ ಕುರಿತು ಹಗುರವಾಗಿ ಮಾತನಾಡಿರುವ ಶಾಸಕ ಯತ್ನಾಳ್‌ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ರೆಡ್ಡಿ, ಹೋರಾಟಗಾರರ ಬಗ್ಗೆ ಹಾಗೆಲ್ಲ ಮಾತನಾಡಬಾರದು ಎಂದರು.

ಕ್ರಾಸ್‌ಬೀಡ್‌ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಿಂದುಗಳ ಪುಣ್ಯದಿಂದ ಈ ದೇಶವಾಗಿದೆ. ಸಿದ್ದರಾಮಯ್ಯ ಅವರು ಹಿಂದೂಗಳಾಗಿ ಯಾಕೆ ಈ ರೀತಿ ಹೇಳಿಕೆ ನೀಡುತ್ತಾರೋ ಗೊತ್ತಿಲ್ಲ. ಹಿಂದು ಹೆಣ್ಣುಮಕ್ಕಳನ್ನು ಕನ್ವರ್ಟ್‌ ಮಾಡಿದರೆ ನೋವಾಗುತ್ತದೆ. ನಮ್ಮ ಹಿಂದೂ ಸಮಾಜ ಲವ್‌ ಜಿಹಾದ್‌ ಒಪ್ಪೋದಿಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.