ಕಲಬುರಗಿ(ಜ.27): ಯಡಿಯೂರಪ್ಪ ಅಸಹಾಯಕ ಮುಖ್ಯಮಂತ್ರಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.  ರಾವೂರು ಗ್ರಾಮದ ಸರ್ಕಾರಿ ಶಾಲೆ ಕಾಂಪೌಂಡ್, ಶುದ್ಧ ಕುಡಿಯುವ ನೀರಿನ ಘಟಕ, ಗಂಡು ಮತ್ತು ಹೆಣ್ಣುಮಕ್ಕಳ ಶೌಚಾಲಯ ಹಾಗೂ ಇತರೆ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿ, ತುಂಬಾ ಕಷ್ಟಪಟ್ಟು ಬೇರೆ ಪಕ್ಷದ ಶಾಸಕ, ಸಚಿವರನ್ನ ರಾಜೀನಾಮೆ ಕೊಡಿಸಿ ನೂರಾರು ಕೋಟಿ ಖರ್ಚು ಮಾಡಿ ಸಿಎಂ ಆದ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದಾರೆ. 

ಮೋದಿ ಮತ್ತು ಶಾ ಮುಖ್ಯಮಂತ್ರಿಗೆ ಟೈಮ್ ಕೊಡುತ್ತಿಲ್ಲ. ಗೆದ್ದು ಬಂದ ಶಾಸಕರು ಮಂತ್ರಿಗಿರಿಗಾಗಿ ಕಾಯುತ್ತಿದ್ದಾರೆ, ಅವರಿಗೆ ಏನು ಸಹಾಯ ಮಾಡದೆ ಸಿಎಂ ಅಸಹಾಯಕರು ಆಗಿದ್ದಾರೆ ಎಂದು ವ್ಯಂಗ್ಯವಾಡಿದರು. 
ಶಾಸಕರಿಗೆ ಮಂತ್ರಿ ಮಾಡ್ತಾರೋ ಬಿಡ್ತಾರೋ ಅದಕ್ಕಿಂತ ಮುಖ್ಯವಾಗಿ ಈ ರಾಜ್ಯದ ರೈತರು ಹಾಗೂ ಸಾರ್ವಜನಿಕರು ಭೀಕರ ನೆರೆಹಾವಳಿಗೆ ಕೋಟ್ಯಂತರ ರು. ಮೌಲ್ಯದ ಬೆಳೆ ಹಾನಿ, ಆಸ್ತಿ ಪಾಸ್ತಿ ಕಳೆದುಕೊಂಡಿದ್ದರೂ ಅವರಿಗೆ ಸಹಾಯ ಮಾಡದ ಸ್ಥಿತಿಯಲ್ಲಿರುವ ಯಡಿಯೂರಪ್ಪ ನಿಜಕ್ಕೂ ಹೆಲ್ಪ್ ಲೆಸ್ ಸಿಎಂ ಎಂದು ಶಾಸಕರು ಟೀಕಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಲ್ಯಾಣ ಕರ್ನಾಟಕ ಹೆಸರು ಬದಲಾಯಿಸಿದ ತಕ್ಷಣ ಈ ಭಾಗಕ್ಕೆ ವಾರ್ಷಿಕ 1500 ಕೋಟಿಗೆ ಬದಲು ರು.2500 ಕೋಟಿ ಕೊಟ್ಟಿದ್ದರೆ ಇವರಿಗೆ ಜನರ ಕಾಳಜಿ ಎಂದು ಹೇಳಬಹುದಿತ್ತು. ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿ ನನ್ನ ಬದ್ಧತೆ ಅದರಂತೆ ನೀವು ಕೂಡ ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಬದ್ಧತೆ ಸಾಬೀತುಪಡಿಸಿ ಎಂದು ಬಿಎಸ್‌ವೈಗೆ ಸವಾಲು ಹಾಕಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಜ್ಯದ ಜನರಲ್ಲದೇ ಕಲ್ಯಾಣ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದ್ದರೂ ಕೂಡ ಜಿಲ್ಲೆಯ ಶಾಸಕರು ತಮ್ಮ ನಾಯಕರ ಮುಂದೆ ಸಮಸ್ಯೆ ಬಿಚ್ಚಿಡಲು ಆಗದೆ ಬರೀ ಭಾಷಣ ಬಿಗಿಯುತ್ತಾರೆ ಎಂದು ಬಿಜೆಪಿ ನಾಯಕರಿಗೆ ಮಾತಿನಲ್ಲೇ ತಿವಿದರು. 

ಕೇವಲ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ದಿಶಾ ಮೀಟಿಂಗ್ ನಲ್ಲಿ ಕಲಬುರಗಿ ಎಂಪಿ ಹೇಳ್ತಾರೆ ಇನ್ನೆರಡು ವರ್ಷ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಅನುದಾನ ನೀಡುವುದಿಲ್ಲ ಎನ್ನುತ್ತಾರೆ. ಇದನ್ನು ಹೇಳೋದಕ್ಕಾ ನಿಮ್ಮನ್ನು ಜನ ಎಂಪಿ ಯನ್ನಾಗಿ ಆಯ್ಕೆ ಮಾಡಿದ್ದಾ? ಎಂದು ಪ್ರಶ್ನಿಸಿದ್ದಾರೆ. 

ಸಿಎಎ ತಯಾರಾಗಿದ್ದು ನಾಗ್ಪುರದಲ್ಲಿ, ದಿಲ್ಲಿಯಲ್ಲಿ ಅಲ್ಲ:

ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‌ಆರ್‌ಸಿ ಯನ್ನು ಜಾರಿಗೊಳಿಸುತ್ತಿದೆ. ಇಂತಹ ಅವೈಜ್ಞಾನಿಕ ಕಾಯಿದೆ ದಿಲ್ಲಿಯಲ್ಲಿ ತಯಾರಾಗಿಲ್ಲ, ಅದು ನಾಗ್ಪುರದಲ್ಲಿ ತಯಾರಿಸಲಾಗಿದೆ ಎಂದೂ ಪ್ರಿಯಾಂಕ್ ಆರೋಪಿಸಿದರು. 

ಆಸ್ಸಾಂನಲ್ಲಿ ಹತ್ತೊಂಬತ್ತು ಲಕ್ಷ ಜನರು ಭಾರತದ ನಾಗರಿಕರಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ, ಇವರಲ್ಲಿ 13 ಲಕ್ಷ ಹಿಂದೂಗಳಿದ್ದಾರೆ. ಬಹುತೇಕ ಜನರು ನಾವೆಲ್ಲ ಹಿಂದೂಗಳು ನಮಗೇನು ಆಗಲ್ಲ ಎಂದು ಮೈಮರೆತಿದ್ದಾರೆ. ಆದರೆ ಇದು ಎಲ್ಲರಿಗೂ ಅನ್ವಯ ಆಗ್ತದೆ ಎನ್ನೋದಕ್ಕೆ ಇದೊಂದೆ ಉದಾಹರಣೆ ಸಾಕು, ಸಿಎಎ ಎಂದರೆ ಏನು ಎಂದು ಗೊತ್ತಿಲ್ಲದ ಕೆಲ ಬಿಜೆಪಿ ನಾಯಕರು ಉದ್ದುದ್ದ ಭಾಷಣ ಬಿಗಿಯುತ್ತಾರೆ. ಅವರಿಗೆ ನಾನು ಒಂದು ಚಾಲೆಂಜ್ ಮಾಡ್ತೇನೆ ಬಿಜೆಪಿ ಕಡೆಯಿಂದ ಯಾರೇ ಬರಲಿ ನಾನೊಬ್ಬನೇ ಸಾಕು ಅವರೊಂದಿಗೆ ಬಹಿರಂಗ ಚರ್ಚೆ ಮಾಡುತ್ತೇನೆ ಎಂದು ಶಾಕಸರು ಸವಾಲ್ ಹಾಕಿದರು. 

ಜನನಾಯಕರೇನು ದೇವರಲ್ಲ: 

ಜನಪ್ರತಿನಿಧಿಗಳು ದೇವರಲ್ಲ. ನೀವು ಹಾಕಿದ ಮತಗಳಿಂದಲೇ ನಾವು ಆಯ್ಕೆಯಾಗಿ ವಿಧಾನಸೌಧಕ್ಕೆ ಹೋಗಿದ್ದೇವೆ. ನಿಮ್ಮ ಸೇವೆ ಮಾಡುವುದೇ ನಮ್ಮ ಕರ್ತವ್ಯ. ಜನಪ್ರತಿನಿಧಿಗಳು ಆಯ್ಕೆಯಾಗುವುದು ಸಂವಿಧಾನದ ನೀಡಿದ ಸಮಾನತೆ ಅವಕಾಶದಿಂದ ಹಾಗೂ ಅದರ ಆಶಯದಿಂದ. ಅದನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದರೆ ಇತ್ತೀಚಿನ ಬೆಳವಣಿಗೆಗಳು ಸಂವಿಧಾನದ ಆಶಯಗಳಿಗೆ ಪೆಟ್ಟು ನೀಡುತ್ತಿವೆ ಎನಿಸುತ್ತಿದೆ. ಸಂವಿಧಾನ ಉಳಿದರೆ ಮಾತ್ರ ನಮಗೆಲ್ಲ ಭವಿಷ್ಯ ಇಲ್ಲದಿದ್ದರೆ ಸರ್ವಾಧಿಕಾರದ ಅಡಿಯಲ್ಲಿ ನಾವೆಲ್ಲ ಜೀವಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. 

ತಾಪಂ ಅಧ್ಯಕ್ಷ ಜಗನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಬಿಜೆಪಿಯವರು ಕಾಂಗ್ರೆಸ್ ಕಾರ್ಯಕರ್ತರನ್ನು ಕೆಣಕುತ್ತಿದ್ದಾರೆ. ಇಂತಹ ಪ್ರಯತ್ನಗಳಿಂದ ಕಾಂಗ್ರೆಸ್ ಪಕ್ಷ ಕೈಗೊಳ್ಳುವ ಅಭಿವೃದ್ಧಿಗೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದರು. ಜಗನಗೌಡ ಪೊಲೀಸ್ ಪಾಟೀಲ್, ಶ್ರೀನಿವಾಸ ಸಗರ, ಡಾ. ಶಾಮಸುಂದರ ರೆಡ್ಸನ್, ಸಾಬಣ್ಣ ಆನೆಮಿ, ಜುಮ್ಮಣ್ಣಾ ಪೂಜಾರಿ, ಅಜೀಜ್ ಸೇಠ್, ವಿಶ್ವನಾಥ್ ಗಂಜಿ, ದಾನಮ್ಮ ಮುಸ್ಲಾ ಇದ್ದರು.