'ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಯಡಿಯೂರಪ್ಪ ಸರ್ಕಾರಕ್ಕೆ ತಾತ್ಸಾರ'
ಪ್ರಿಯಾಂಕ್ ಖರ್ಗೆ ಫೇಸ್ಬುಕ್‌ನಲ್ಲಿ ಬಿಎಸ್ ವೈ ಸರ್ಕಾರದ ಬಗ್ಗೆ ಲೇವಡಿ| ಕಲ್ಯಾಣ ನಾಡಿನ ಜನಮನದ ಬೇಡಿಕೆಗೆ ಸ್ಪಂದನೆ ಶೂನ್ಯ|ಹಿಂದುಳಿದ ಭಾಗದ ಅಭಿವೃದ್ಧಿಗೆ ಸಿಎಂ ಗಮನಹರಿಸಲಿ|
ಕಲಬುರಗಿ(ಫೆ.20): ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಪೊರೈಸುವಲ್ಲಿ ವಿಫಲ, ತೊಗರಿ ಬೆಂಬಲ ಬೆಲೆಯಲ್ಲಿ 125 ರು. ಕಡಿತ, ಪ್ರತಿ ತೊಗರಿ ಬೆಳೆಗಾರರಿಂದ 20 ಕ್ವಿಂಟಲ್ ತೊಗರಿ ಖರೀದಿಸುವ ವಾಗ್ದಾನ ಈಡೇರಿಸುವಲ್ಲಿ ವಿಫಲ, ಕೆಕೆಆರ್‌ಡಿಬಿಗೆ ಅಧ್ಯಕ್ಷರನ್ನು ನೇಮಿಸುವಲ್ಲಿ ವಿಳಂಬ, ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಲ್ಲಿ ಮಾತು ತಪ್ಪಿರುವುದು, ಇನ್ವೆಸ್ಟ್ ಕರ್ನಾಟಕದ ಕೈಗಾರಿಕ ಮೇಳದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋಸ, ಶೂನ್ಯ ಬಂಡವಾಳ ಸಾಧನೆ’ ಹಿಂಗಾದ್ರೆ ಕಲ್ಯಾಣ ಕರ್ನಾಟಕದ ಪ್ರಗತಿ ಆದ್ಹಂಗೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕದ ಪ್ರತಿ ಸಿಎಂ ಹುಸಿ ಪ್ರೀತಿ ತಮ್ಮದೇ ಆದಂತಹ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.
ಹೀಗೆಲ್ಲಾ ಚಿತ್ರಗಳು, ಪಾಯಿಂಟರ್‌ಗಳ ಸಮೇತ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಚಿವರು ಬರೆದುಕೊಂಡಿದ್ದಾರೆ. ಉದ್ದುದ್ದ ಮಾತಿನವರ ಮೊಳಕೈ ಮೊಂಡು ಅಂತಾರಲ್ಲ ಹಂಗೇ ಈ ಬಿಜೆಪಿ ಸರ್ಕಾರದಲ್ಲಿ ಕಲಬುರಗಿ ಸರಿದಂತಿರುವ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳವರ ಪರಿಸ್ಥಿತಿಯಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಲ್ಯಾಣ ಕರ್ನಾಟಕ ಭಾಗವನ್ನು ರಾಜ್ಯ ಸರ್ಕಾರ ಕಡೆಗಣಿಸಿದ್ದು ಇದರಿಂದ ಸ್ಪಷ್ಟವಾಗಿದೆ. ಸಿಎಂ ಕಲ್ಯಾಣ ಕರ್ನಾಟಕದ ಪ್ರಗತಿಗೆ ಆಸಕ್ತರಾಗದೆ ತಾತ್ಸಾರ ಭಾವನೆ ಹೊಂದಿದ್ದಾರೆ. ಈ ಕುರಿತು ನೇರವಾಗಿಯೇ ಅನೇಕ ದಾಖಲೆಗಳ ಸಮೇತ ಫೇಸ್ಬುಕ್‌ನಲ್ಲಿ ಬರೆದುಕೊಂಡಿರುವ ಖರ್ಗೆ ಸರ್ಕಾರದ ಧೋರಣೆ ವಿರುದ್ಧ ಬೇಸರ ಹೊರಹಾಕಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಈ ತಾತ್ಸಾರ ಭಾವನೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕೇವಲ ಕಲ್ಯಾಣ ಭಾಗದ ಬಗ್ಗೆ ಹುಸಿ ಭರವಸೆ, ಕ್ರಮಗಳ ಬಗ್ಗೆಯೇ ಮಾತನಾಡುತ್ತ ಕಾಲಹರಣ ಮಾಡುತ್ತಿರುವ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಇನ್ನಾದರೂ ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ಗಮನಹರಿಸಲಿ ಎಂದು ಆಗ್ರಹಿಸಿದ್ದಾರೆ.