ಕಲಬುರಗಿ(ಜು.20): ನಗರದ ಜಿಲ್ಲಾಸ್ಪತ್ರೆ ಹಂದಿಗಳ ತಾಣವಾಗಿರುವುದರ ಕುರಿತು ಮಾಧ್ಯಮದಲ್ಲಿ ವರದಿಯಾಗಿದ್ದಕ್ಕೆ ಶಾಸಕ ಪ್ರಿಯಾಂಕ್‌ ಖರ್ಗೆ ಬಿಜೆಪಿ ಸರಕಾರದ ಕುರಿತು ವ್ಯಂಗ್ಯವಾಡಿದ್ದಾರೆ.

ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿ ತುಣುಕೊಂದನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ಶಾಸಕರು ಕಲ್ಯಾಣ ಕರ್ನಾಟಕವನ್ನು ರಾಷ್ಟ್ರೀಯ ಮಾಧ್ಯಮದಲ್ಲಿ ಈ ರೀತಿ ಹೈಲೈಟ್‌ ಆಗುವಂತೆ ಮಾಡಿರುವುದಕ್ಕೆ ಬಿಜೆಪಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಲಬುರಗಿ: ಕೋವಿಡ್‌ ಆಸ್ಪತ್ರೆಯಲ್ಲಿ ಹಂದಿಗಳು ಸಾರ್‌ ಹಂದಿಗಳು..!

ತಮ್ಮ ವ್ಯಂಗ್ಯಭರಿತ ಟ್ವೀಟ್‌ ನಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಾಸಕರು ದೇಶದಲ್ಲಿಯೇ ಮೊದಲ ಕೋವಿಡ್‌ ಸಾವು ವರದಿಯಾಗಿರುವುದು ಕಲಬುರಗಿಯಲ್ಲಿ. ಇಷ್ಟಾದರೂ ಕೂಡಾ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡದೆ ನಾವೆಲ್ಲ ಯಾವ ಪಾಠ ಕಲಿತಿದ್ದೇವೆ? ಬೇರೆಯವರಿಗೆ ಏನು ಸಂದೇಶ ರವಾನಿಸಿದ್ದೇವೆ? ಎಂದು ಪ್ರಶ್ನಿಸಿದ ಅವರು ಬಿಜೆಪಿ ಸರಕಾರ ಲಾಭ ಮಾಡಿಕೊಳ್ಳುವುದರಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದ್ದಾರೆ.