Asianet Suvarna News Asianet Suvarna News

'ಕೊರೋನಾ ಪ್ಯಾಕೇಜ್‌ ಘೋಷಣೆಗಷ್ಟೇ ಸೀಮಿತ'

ಪ್ಯಾಕೇಜ್‌ ಸೌಲಭ್ಯ ಸಂಬಂಧಪಟ್ಟ ಫಲಾನುಭವಿಗಳಿಗೆ ಸಿಕ್ಕಿಲ್ಲ| ವಸತಿ ನಿಲಯಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ| ಕಾಂಗ್ರೆಸ್‌ ಸರ್ಕಾರದಲ್ಲಿ ಎಲ್ಲ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ಕ್ರಮ ವಹಿಸಲಾಗಿತ್ತು| ಈ ರಾಜ್ಯ ಸರ್ಕಾರ ಜನರಿಗೆ ಹಾಗೂ ರೈತರಿಗೆ ಅಂಗೈಯಲ್ಲೇ ಆಕಾಶ ತೋರಿಸುತ್ತಿದೆ|

MLA P T Parameshwara Naik Talks Over Corona Package
Author
Bengaluru, First Published Jun 7, 2020, 9:25 AM IST

ಹೂವಿನಹಡಗಲಿ(ಜೂ.07): ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್‌ ಸೌಲಭ್ಯ ಸಂಬಂಧಪಟ್ಟ ಫಲಾನುಭವಿಗಳಿಗೆ ಸಿಕ್ಕಿಲ್ಲ. ಇದು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಆರೋಪಿಸಿದ್ದಾರೆ. 

ಪಟ್ಟಣದ ಹಂಸಸಾಗರ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 3.25 ಕೋಟಿ ವೆಚ್ಚದಲ್ಲಿ ನಿರ್ಮಾ​ಣ​ವಾ​ಗು​ತ್ತಿ​ರುವ ಎಸ್ಟಿ ವಸತಿ ನಿಲಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಕೂಲಿ ಕಾರ್ಮಿಕರು, ರೈತರು, ಮಲ್ಲಿಗೆ ಬೆಳೆಗಾರರು, ವಾಹನ ಚಾಲಕರು ಸೇರಿದಂತೆ ಇತರರಿಗೆ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್‌ ಹಣ ಅವರ ಬ್ಯಾಂಕ್‌ ಖಾತೆಗೆ ಸಂದಾಯವಾಗಿಲ್ಲ. ಬರಿ ಬೊಗಳೆ ಬಿಡುತ್ತಿದೆ ಎಂದು ಆರೋಪಿಸಿದರು.

ಬಳ್ಳಾರಿ: ಜಿಂದಾಲ್‌ನ ಮೂವರು ಸೇರಿ ಆರು ಜನರಿಗೆ ಕೊರೋನಾ ಪಾಸಿಟಿವ್‌

ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು, ಮೈ ಮೇಲೆ ಹಸಿರು ಟವಲ್‌ ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿ ರೈತರ ಹಿತ ಕಾಪಾಡದೇ, ಬೂಟಾಟಿಕೆ ಮಾಡುತ್ತಿದ್ದಾರೆ. ಸರ್ಕಾರ ರೈತರ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜಗಳನ್ನು ನೀಡುತ್ತಿಲ್ಲ. ಬಿತ್ತನೆ ಬಗ್ಗೆ ರೈತರಿಗೆ ಅನುಭವವಿದೆ. ಆದರೆ, ಸರ್ಕಾರದಲ್ಲಿ ಇರುವವರಿಗೆ ಕೃಷಿ ಅನುಭವ ಕೊರತೆ ಇದೆ. 1200ಗೆ ಪ್ಯಾಕೇಟ್‌ ಮೆಕ್ಕೆಜೋಳ ಬೆಲೆ ಇದೆ. ಆದರೆ, ಅದೇ ರೈತರು ಬೆಳೆದ ಮೆಕ್ಕೆಜೋಳ ಕ್ವಿಂಟಲ್‌ಗೆ 1200 ಇಲ್ಲ. ಈಗಾಗಲೇ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಈವರೆಗೂ ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆಯದಿರುವುದು ವಿಷಾದಕರ ಎಂದರು.

ಬಿತ್ತನೆ ಬೀಜ ವಿತರಣೆಗೆ ಬಗ್ಗೆ ಕೃಷಿ ಸಚಿವರೊಂದಿಗೆ ಮಾತನಾಡಿದ್ದೇನೆ, ಎಕರೆಗೆ 3 ಪ್ಯಾಕೇಟ್‌ ಮೆಕ್ಕೆಜೋಳ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಈ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಎಲ್ಲ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ಕ್ರಮ ವಹಿಸಲಾಗಿತ್ತು. ಈ ರಾಜ್ಯ ಸರ್ಕಾರ ಜನರಿಗೆ ಹಾಗೂ ರೈತರಿಗೆ ಅಂಗೈಯಲ್ಲೇ ಆಕಾಶ ತೋರಿಸುತ್ತಿದೆ. ಈ ಸರ್ಕಾರದ ಅನುದಾನ ಕನ್ನಡಿಯೊಳಗಿನ ಗಂಟಿನಂತಾಗಿದೆ ಎಂದರು.
ಪಟ್ಟಣದಲ್ಲಿ ಎಸ್ಟಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು 4 ಅಂತಸ್ತಿನ . 3.25 ಕೋಟಿ ವೆಚ್ಚದಲ್ಲಿ ಬಹು ಮಹಡಿ ಕಟ್ಟಡ ನಿರ್ಮಾಣವಾಗಲಿದೆ. ಇದರಲ್ಲಿ 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ವಾರದ ಗೌಸ್‌ ಮೋಹಿದ್ದೀನ್‌, ಅಟವಾಳಗಿ ಕೊಟ್ರೇಶ, ಬ್ಯಾಲಹುಣ್ಸಿ ಬಸವನಗೌಡ ಪಾಟೀಲ್‌, ಜ್ಯೋತಿ ಮಲ್ಲಣ್ಣ, ಎಸ್‌. ಹಾಲೇಶ, ಜಿ.ವಸಂತ, ಪುರಸಭೆ ಸದಸ್ಯರು, ಸಮಾಜಕಲ್ಯಾಣಾಧಿಕಾರಿ ಡಾ. ಮಲ್ಲಿಕಾರ್ಜುನ, ಬಿಸಿಎಂ ಅಧಿಕಾರಿ ಎಂ.ಪಿ.ಎಂ. ಅಶೋಕ, ಪುರಸಭೆ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ ಸೇರಿದಂತೆ ಇತರರಿದ್ದರು.
 

Follow Us:
Download App:
  • android
  • ios