ಸಂತ್ರಸ್ತರಿಗೆ ಪರಿಹಾರ ನೀಡಲಾಗದೆ ಹೆದರಿ ಬೆಳಗಾವಿ ಅಧಿವೇಶನ ಬೆಂಗಳೂರಿಗೆ ಶಿಫ್ಟ್: ಎಂ.ಬಿ. ಪಾಟೀಲ
ಅತಿವೃಷ್ಟಿ ಬಗ್ಗೆ ಸರ್ಕಾರ ನಿರ್ಲಕ್ಷ್ಯ, ಸಂತ್ರಸ್ತರಿಗೆ ಅಪಮಾನ: ಶಾಸಕ ಎಂ.ಬಿ. ಪಾಟೀಲ| ಸಂತ್ರಸ್ತರಿಗೆ ಹೆದರಿ ಬೆಳಗಾವಿ ಅಧಿವೇಶನ ಬೆಂಗಳೂರಿಗೆ ಶಿಫ್ಟ್| ಶತಮಾನದಲ್ಲಿಯೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಇಂತಹ ಭೀಕರ ಪ್ರವಾಹ ಬಂದಿದೆ| ಬಿಜೆಪಿ ಸರ್ಕಾರ ಅತಿವೃಷ್ಟಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ| ಸಿಎಂ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ|
ವಿಜಯಪುರ:(ಸೆ.21) ಬೆಳಗಾವಿ ಜಿಲ್ಲೆಯಲ್ಲೇ ಅತಿ ನೆರೆ ಹಾವಳಿಯಾಗಿದೆ. ಈ ಜಿಲ್ಲೆಯಲ್ಲೇ ಸಂತ್ರಸ್ತರು ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿವೇಶನ ಬೆಳಗಾವಿಯಲ್ಲಿಯೇ ನಡೆಯಬೇಕಿತ್ತು. ಆದರೆ ಸಂತ್ರಸ್ತರಿಗೆ ಹೆದರಿ ಅಧಿವೇಶನವನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಬಿ. ಪಾಟೀಲ ಅವರು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಂತ್ರಸ್ತರು ಮುತ್ತಿಗೆ ಹಾಕುತ್ತಾರೆ ಎಂಬ ಭಯದಿಂದ ಅಧಿವೇಶನವನ್ನು ಬೆಂಗಳೂರಿಗೆ ಶಿಫ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶತಮಾನದಲ್ಲಿಯೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಇಂತಹ ಭೀಕರ ಪ್ರವಾಹ ಬಂದಿದೆ. ಈ ಪ್ರವಾಹದಲ್ಲಿ ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಅವರಿಗೆ ತಾತ್ಕಾಲಿಕ ಶೆಡ್ ಕೂಡಾ ಹಾಕಿಲ್ಲ. ನೂರಾರು ಕೋಟಿ ಬೆಳೆ ಹಾನಿಯಾಗಿದೆ. ಅದಕ್ಕೂ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ 10,000 ಪರಿಹಾರ ಕೊಟ್ಟಿರುವುದೇ ಹೆಚ್ಚು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳುತ್ತಾರೆ. ಸಚಿವ ಮಾಧುಸ್ವಾಮಿ ಅವರು ನಾಲ್ಕಾಣೆ ಬಂದರೆ ಅದೇ ಹೆಚ್ಚು ಎನ್ನುತ್ತಿದ್ದಾರೆ. ಈ ಸರ್ಕಾರ ಅತಿವೃಷ್ಟಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರಕ್ಕೆ ಬದ್ಧತೆ ಇಲ್ಲ, ಮನಸ್ಸಿಲ್ಲ. ಸಂತ್ರಸ್ತರೊಂದಿಗೆ ಚೆಲ್ಲಾಟವಾಡುತ್ತಿದೆ, ಅಪಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಿಎಂ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಅನುದಾನವನ್ನು ತಡೆ ಹಿಡಿಯಲಾಗಿದೆ. ಸರ್ಕಾರಕ್ಕೆ ಗೊತ್ತು ಗುರಿ ಇಲ್ಲ. ಹಿಂದಿನ ಸಮ್ಮಿಶ್ರ ಸರ್ಕಾರ ಇದಕ್ಕಿಂತ ನೂರು ಪಟ್ಟು ಚೆನ್ನಾಗಿತ್ತು ಎಂದು ಹೇಳಿದರು.