ಮಂಡ್ಯ(ಜು.11): ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ತರಕಾರಿ ಮಾರಾಟದಲ್ಲಿ ತೊಡಗಿರುವ ಎಂಜಿನಿಯರ್‌ ಸಂಕಷ್ಟಕ್ಕೆ ಸ್ಪಂದಿಸಿರುವ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಅವರು 50 ಸಾವಿರ ರೂ. ನೆರವು ನೀಡಿದ್ದಾರೆ.

ತರಕಾರಿ ಮಾರುತ್ತಿರುವ ಎಂಜಿನಿಯರ್‌ ಶೀರ್ಷಿಕೆಯಡಿ ಕನ್ನಡಪ್ರಭ ಪತ್ರಿಕೆಯಲ್ಲಿ ಜು.9ರಂದು ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಓದಿದ ಶಾಸಕ ಡಿ.ಸಿ.ತಮ್ಮಣ್ಣ ಅವರು ಉದ್ಯೋಗ ಕಳೆದುಕೊಂಡರೂ ಜೀವನೋತ್ಸಾಹ ಕಳೆದುಕೊಳ್ಳದೆ ತರಕಾರಿ ಮಾರಾಟದಲ್ಲಿ ತೊಡಗಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೋನಾ ಟೆಸ್ಟ್ ಮಾಡಿದ್ಮೇಲೇನೇ ಕರ್ನಾಟಕದ ಈ ಗ್ರಾಮಕ್ಕೆ ಪ್ರವೇಶ..!

ಶುಕ್ರವಾರ ನಗರದ ಜಿಲ್ಲಾ ಕಾರಾಗೃಹ ಸಮೀಪದ ಬನ್ನೂರು ರಸ್ತೆ ಪಕ್ಕದಲ್ಲಿ ಯುವತಿ ತರಕಾರಿ ಮಾರಾಟದಲ್ಲಿ ತೊಡಗಿರುವ ಸ್ಥಳಕ್ಕೆ ತೆರಳಿದ ಡಿ.ಸಿ.ತಮ್ಮಣ್ಣ ಅವರು 50 ಸಾವಿರ ರೂ. ನೆರವು ನೀಡಿದರು.

ನಂತರ ಮಾತನಾಡಿದ ಅವರು, ಅನು ಧೈರ್ಯವಂತ ಹೆಣ್ಣು ಮಗಳು. ಓದಿ ವಿದ್ಯಾವಂತರಾದವರು ಉದ್ಯೋಗವಿಲ್ಲವೆಂದು ಕೊರಗುತ್ತಾ ಮನೆಯಲ್ಲೇ ಕುಳಿತಿರುವ ಸಮಯದಲ್ಲಿ ತರಕಾರಿ ಮಾರಿಯಾದರೂ ಬದುಕನ್ನು ಕಟ್ಟಿಕೊಳ್ಳುತ್ತೇನೆ. ತಂದೆ-ತಾಯಿಯ ಕಷ್ಟಕ್ಕೆ ನೆರವಾಗುತ್ತೇನೆಂಬ ಆತ್ಮವಿಶ್ವಾಸ ಹೊಂದಿರುವ ಅನು ಎಲ್ಲರಿಗೂ ಮಾದರಿಯಾಗಿದ್ದಾಳೆ ಎಂದು ಪ್ರಶಂಸಿಸಿದರು.

'ಗೋಮಾತೆ ಕಸಾಯಿಖಾನೆಗೆ ಹೋಗಬಾರದು ಇದು ಬಿಜೆಪಿ ಸರ್ಕಾರದ ಸಂಕಲ್ಪ'

ಹೆಣ್ಣು ಮಕ್ಕಳು ವಿದ್ಯೆ ಮತ್ತು ಉದ್ಯೋಗದಲ್ಲಿ ಮುಂದೆ ಇದ್ದಾರೆ. ಆದರೆ, ಹುಡುಗರು ಓದಿನಲ್ಲೂ ಹಿಂದೆ ಬಿದ್ದಿದ್ದಾರೆ. ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳುವ ಉತ್ಸಾಹವನ್ನೂ ತೋರುತ್ತಿಲ್ಲ. ಅಂತಹವರಿಗೆಲ್ಲಾ ಅನು ಬದುಕು ಮಾರ್ಗದರ್ಶಿಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಅನು ಓದಿಗೆ ತಕ್ಕಂತಹ ಉದ್ಯೋಗವನ್ನು ದೊರಕಿಸಿಕೊಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್‌, ಖಜಾಂಚಿ ಕೆ.ಶ್ರೀನಿವಾಸ್‌, ಪತ್ರಕರ್ತ ಬಿ.ಟಿ.ಮೋಹನ್‌ಕುಮಾರ್‌ ಇತರರು ಹಾಜರಿದ್ದರು.