ಬೆಂಗಳೂರು (ಸೆ.24):  ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ವಿಂಗಡಿಸದ ಮನೆಗೆ ದಿನಕ್ಕೆ 1 ಸಾವಿರ ರು. ದಂಡ ವಿಧಿಸಿ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

ಬುಧವಾರ ನಗರದ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌ ಹಾಗೂ ದೀಪಾಂಜಲಿನಗರ ವಾರ್ಡ್‌ನಲ್ಲಿ ಪ್ರತ್ಯೇಕ ತ್ಯಾಜ್ಯ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ಮಾತನಾಡಿದ ಅವರು, ಕಸವನ್ನು ನಿಯಮಿತವಾಗಿ ವಿಂಗಡಣೆ ಮಾಡದ ಮನೆಗಳಿಗೆ ದಿನಕ್ಕೆ .1 ಸಾವಿರ ದಂಡ ವಿಧಿಸಲು ಅವಕಾಶವಿದೆ. ಇನ್ನು ಕಸವನ್ನು ರಸ್ತೆಗೆ ತಂದು ಎಸೆಯುವವರಿಗೆ ದಂಡ ವಿಧಿಸುವ ಮತ್ತು ಬಂಧಿಸುವುದಕ್ಕೂ ಅವಕಾಶವಿದೆ ಎಂದು ತಿಳಿಸಿದರು.

ಮನೆ- ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಸಿಬ್ಬಂದಿ ತ್ಯಾಜ್ಯ ವಿಂಗಡಿಸದ ಮನೆಗಳ ವಿಳಾಸದ ಪಟ್ಟಿಯನ್ನು ತ್ಯಾಜ್ಯ ಸಂಪರ್ಕ ಕಾರ್ಯಕರ್ತರಿಗೆ ಕೊಡಬೇಕು. ತ್ಯಾಜ್ಯ ಸಂಪರ್ಕ ಕಾರ್ಯಕರ್ತರು ಆ ಮನೆಗಳಿಗೆ ಭೇಟಿ ನೀಡಿ ಮನೆಯ ಸದಸ್ಯರಿಗೆ ಕಸ ವಿಂಗಡಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಬಳಿಕವೂ ತ್ಯಾಜ್ಯ ವಿಂಗಡಿಸದಿದ್ದರೆ ಬಿಬಿಎಂಪಿ ಮಾರ್ಷಲ್‌ಗಳು ಆ ಮನೆಗಳಿಗೆ ದಿನಕ್ಕೆ .1 ಸಾವಿರ ದಂಡ ವಿಧಿಸಬಹುದು ಎಂದು ವಿವರಿಸಿದರು.

ಬಿಬಿಎಂಪಿ ವಾರ್ಡ್‌ ಸಂಖ್ಯೆ 250ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಜಂಟಿ ಸಮಿತಿ ಶಿಫಾರಸು ...

ಇನ್ನು ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವವರು ನಿರ್ದಿಷ್ಟಸಮಯಕ್ಕೆ ಹಾಗೂ ಎಲ್ಲ ಮನೆಯಿಂದ ಪ್ರತಿ ದಿನ ತ್ಯಾಜ್ಯ ಸಂಗ್ರಹಿಸಬೇಕು. ರಸ್ತೆ ಕಸ ಎಸೆಯುವುದಕ್ಕೆ ಅವಕಾಶ ನೀಡಬಾರದು. ರಸ್ತೆಗೆ ಕಸ ಎಸೆಯುವುದರಿಂದ ಬ್ಲಾಕ್‌ ಸ್ಪಾಟ್‌ ಸೃಷ್ಟಿಯಾಗಿ ಕಾಯಿಲೆ ಹರಡುವ ಸಾಧ್ಯತೆ ಇರಲಿದೆ. ಅದಕ್ಕೆ ಅವಕಾಶ ನೀಡಬಾರದು ಎಂದು ತ್ಯಾಜ್ಯ ಸಂಗ್ರಹಿಸುವ ಸಿಬ್ಬಂದಿಗೆ ಹಾಗೂ ಪೌರಕಾರ್ಮಿಕರಿಗೆ ತಿಳಿಸಿದರು. ಸಿಬ್ಬಂದಿಯು ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಿದ ಬಳಿಕ ಕಸವನ್ನು ರಸ್ತೆಯಲ್ಲಿ ಸುರಿಯುವಂತಿಲ್ಲ. ಆಟೋದಿಂದ ನೇರವಾಗಿ ಕಾಂಪ್ಯಾಕ್ಟರ್‌ಗೆ ಲೋಡ್‌ ಆಗಬೇಕು ಎಂದರು.

ಈ ವೇಳೆ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಅಧೀಕ್ಷಕ ಎಂಜಿನಿಯರ್‌ ಬಸವರಾಜ್‌ ಕಬಾಡೆ, ಮುಖ್ಯ ಎಂಜಿನಿಯರ್‌ ವಿಶ್ವನಾಥ್‌ ಹಾಗೂ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.