ಪತ್ತೆಯಾಗದ ತ್ರಿಭುಜ ಬೋಟ್: ಕಾರವಾರ ನೌಕಾನೆಲೆಗೆ ಮೀನುಗಾರರ ಮುತ್ತಿಗೆ!
ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ ತಿಂಗಳುಗಳೆ ಕಳೆದಿದ್ದರೂ ಯಾವುದೆ ಮಾಹಿತಿ ಲಭ್ಯವಾಗಿಲ್ಲ. ಸಹಜವಾಗಿಯೇ ಅಧಿಕಾರಿಗಳ ಮೇಲೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉಡುಪಿ[ಫೆ.16] ಎರಡು ತಿಂಗಳು ಕಳೆದರೂ ಕಾಣೆಯಾದ ಸುವರ್ಣ ತ್ರಿಭುಜ ಬೋಟು ಮತ್ತು ಮೀನುಗಾರರ ಬಗ್ಗೆ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳ ಬಗ್ಗೆ ಮೀನುಗಾರರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ ಮತ್ತು ಉತ್ತರ ಕನ್ನಡ ಮೀನುಗಾರರ ನಾಯಕರು ಶನಿವಾರ ಉಡುಪಿ ಎಸ್ಪಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಅಧಿಕಾರಿಗಳ ಮಾತಿನಿಂದ ತೃಪ್ತಿಯಾಗದ ಮೀನುಗಾರರರು ಸರಕಾರ ತಕ್ಷಣ ಸರಿಯಾದ ಮಾಹಿತಿ ನೀಡದಿದ್ದಲ್ಲಿ ಕಾರವಾರ ನೌಕಾನೆಲೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದೆ.
ಡಿ.13ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಡಿ.15ರ ರಾತ್ರಿಯಿಂದ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿದ್ದಾರೆ. ಸುವರ್ಣ ತ್ರಿಭುಜ ಬೋಟ್ ನಲ್ಲಿ ಏಳು ಮಂದಿ ಮೀನುಗಾರರಿದ್ದರು. ಬೋಟ್ ಸಹಿತ ಮೀನುಗಾರರ ಅಪಹರಣ ಅಥವಾ ಸಮುದ್ರ ಮಧ್ಯೆ ಬೋಟು ಅವಘಡಕ್ಕೀಡಾಗಿರುವ ಕುರಿತು ಪೊಲೀಸರು ತನಿಖೆ ನಡೆಸಿದ್ದರು. ಅಪಹರಣದ ತನಿಖೆಗಾಗಿ ಒಟ್ಟು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳಕ್ಕೆ ತೆರಳಿ ಅಲ್ಲಿ ಹುಡುಕಾಟ ಹಾಗೂ ತನಿಖೆಯನ್ನು ನಡೆಸಿದ್ದವು ಆದರೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.