ಹಾವೇರಿಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮಿಸ್ಸಿಂಗ್ ಕೇಸ್!
ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು, ಯುವತಿಯರು ಮತ್ತು ಮಹಿಳೆಯರ ನಾಪತ್ತೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ದಾಖಲಾಗುತ್ತಿದೆ. ಪ್ರಸಕ್ತ ವರ್ಷವೇ 11 ಬಾಲಕಿಯರು ನಾಪತ್ತೆಯಾಗಿದ್ದು, ಇನ್ನೂ ನಾಲ್ವರ ಪತ್ತೆಯಾಗಿಲ್ಲ.
ನಾರಾಯಣ ಹೆಗಡೆ
ಹಾವೇರಿ (ನ.18): ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು, ಯುವತಿಯರು ಮತ್ತು ಮಹಿಳೆಯರ ನಾಪತ್ತೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ದಾಖಲಾಗುತ್ತಿದೆ. ಪ್ರಸಕ್ತ ವರ್ಷವೇ 11 ಬಾಲಕಿಯರು ನಾಪತ್ತೆಯಾಗಿದ್ದು, ಇನ್ನೂ ನಾಲ್ವರ ಪತ್ತೆಯಾಗಿಲ್ಲ. ಯುವತಿಯರು, ಮಹಿಳೆಯರು ಸೇರಿ 203 ಜನ ಕಾಣೆಯಾಗಿದ್ದರೆ, 41 ಕೇಸ್ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಿಸ್ಸಿಂಗ್ ಕೇಸ್‌ಗಳ ಸಂಖ್ಯೆ ಪೊಲೀಸ್ ಠಾಣೆಗಳಲ್ಲಿ ಹೆಚ್ಚು ದಾಖಲಾಗುತ್ತಿವೆ. ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ, ಇಲಾಖೆಯು ಜನಸ್ನೇಹಿ ಆಗಿರುವುದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿದೆ.
ಇದರ ಪರಿಣಾಮವಾಗಿ ನಾಪತ್ತೆಯಾದ ತಕ್ಷಣ ಸಮೀಪದ ಠಾಣೆಗೆ ಹೋಗಿ ಸಂಬಂಧಪಟ್ಟವರು ದೂರು ನೀಡುತ್ತಿದ್ದಾರೆ. ಪೊಲೀಸರು ಕೂಡ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಗೆ ಕ್ರಮ ವಹಿಸುತ್ತಿದ್ದರೂ ಅನೇಕರ ಸುಳಿವು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಣೆ ಪ್ರಕರಣ ಇನ್ನೂ ನಡೆದಿಲ್ಲ ಎಂಬುದು ಸಮಾಧಾನಕರ ಸಂಗತಿಯಾದರೂ ಅನೇಕ ವರ್ಷಗಳ ಹಿಂದೆ ದಾಖಲಾದ ಕೇಸ್ ಕೂಡ ಇನ್ನೂ ಟ್ರೇಸ್‌ಔಟ್ ಆಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ರೈತನ ಬದುಕನ್ನೇ ಬರ್ಬಾದ್ ಮಾಡಿದ ಲಂಪಿಸ್ಕಿನ್ ರೋಗ: ಬಂದಷ್ಟು ಬೆಲೆಗೆ ಎತ್ತು ಮಾರಾಟ ಮಾಡುತ್ತಿರುವ ಅನ್ನದಾತ..!
ಪತ್ತೆಯಾಗದ 271 ಕೇಸ್: ಜಿಲ್ಲೆಯಲ್ಲಿ 2012ರಿಂದ 2022ರ ಸೆಪ್ಟೆಂಬರ್‌ವರೆಗಿನ 10 ವರ್ಷಗಳ ಅವಧಿಯಲ್ಲಿ ಪುರುಷರು, ಮಹಿಳೆಯರು ಸೇರಿದಂತೆ 1924 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 1653 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ 271 ಕೇಸ್‌ಗಳಲ್ಲಿ ಕಾಣೆಯಾದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಪ್ರಸಕ್ತ ವರ್ಷವೇ 278 ನಾಪತ್ತೆ ಪ್ರಕರಣ ದಾಖಲಾಗಿದ್ದು, ಅವುಗಳ ಪೈಕಿ 204 ಜನರನ್ನು ಪತ್ತೆ ಮಾಡಲಾಗಿದೆ. ಇನ್ನೂ 74 ಕೇಸ್‌ಗಳ ಪತ್ತೆ ಬಾಕಿಯಿದೆ. ಆತಂಕದ ಸಂಗತಿಯೆಂದರೆ 10 ವರ್ಷಗಳ ಹಿಂದೆ ದಾಖಲಾದ ಕೇಸ್‌ಗಳಲ್ಲಿ ಅನೇಕವು ಇನ್ನೂ ಪತ್ತೆಯಾಗಿಲ್ಲ. 2012ರಲ್ಲಿ ದಾಖಲಾಗಿದ್ದ ಕೇಸ್‌ಗಳಲ್ಲಿ 19, 2013ರಲ್ಲಿ 19, 2014ರಲ್ಲಿ 18, 2015ರಲ್ಲಿ 18, 2016ರಲ್ಲಿ 25, 2017ರಲ್ಲಿ 19, 2018ರಲ್ಲಿ 21, 2019ರಲ್ಲಿ ದಾಖಲಾಗಿದ್ದ 28, 2020ರಲ್ಲಿ 5, 2021ರಲ್ಲಿ 25 ಹಾಗೂ ಪ್ರಸಕ್ತ ಸಾಲಿನಲ್ಲಿ 25 ಸೇರಿದಂತೆ 271 ಜನರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಯುವತಿಯರು, ಮಹಿಳೆಯರೇ ಹೆಚ್ಚು: ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ನಾಪತ್ತೆ ಪ್ರಕರಣಗಳಲ್ಲಿ ಹೆಚ್ಚಿನವು ಯುವತಿಯರು, ಮಹಿಳೆಯರದ್ದೇ ಆಗಿದೆ. ಪ್ರಸಕ್ತ ವರ್ಷ 18 ವರ್ಷದೊಳಗಿನ 11 ಬಾಲಕಿಯರು ನಾಪತ್ತೆಯಾದ ಕೇಸ್ ದಾಖಲಾಗಿದ್ದರೆ, ಇವುಗಳಲ್ಲಿ ಈಗಾಗಲೇ 7 ಬಾಲಕಿಯರನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ ನಾಲ್ವರ ಪತ್ತೆಯಾಗಿಲ್ಲ. 2016ರಲ್ಲಿ ದಾಖಲಾಗಿದ್ದ 1, 2019ರಲ್ಲಿ 1, 2020ರಲ್ಲಿ 2, 2021ರಲ್ಲಿ 2 ಹಾಗೂ ಈ ವರ್ಷ ದಾಖಲಾಗಿದ್ದ ಅಪ್ರಾಪ್ತೆಯರ ಕಾಣೆ ಪ್ರಕರಣದಲ್ಲಿ 4 ಸೇರಿದಂತೆ 10 ಮಿಸ್ಸಿಂಗ್ ಕೇಸ್‌ಗಳನ್ನು ಟ್ರೇಸ್ ಮಾಡಲು ಸಾಧ್ಯವಾಗಿಲ್ಲ.
ಇನ್ನು 18 ವರ್ಷ ಮೇಲ್ಪಟ್ಟ ಯುವತಿಯರು ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ 10 ವರ್ಷಗಳಲ್ಲಿ 1277 ಕೇಸ್‌ಗಳು ದಾಖಲಾಗಿವೆ. ಈ ಪೈಕಿ 1184 ಹೆಣ್ಣು ಮಕ್ಕಳನ್ನು ಪತ್ತೆಹಚ್ಚಲಾಗಿದ್ದು, ಪ್ರಸಕ್ತ ಸಾಲಿನ 37 ಸೇರಿದಂತೆ 93 ಜನರನ್ನು ಪತ್ತೆ ಮಾಡುವುದು ಬಾಕಿಯಿದೆ. ಈ ವರ್ಷ 18ರೊಳಗಿನ 11 ಬಾಲಕರ ನಾಪತ್ತೆ ಪ್ರಕರಣ ದಾಖಲಾಗಿದ್ದು, 9 ಕೇಸ್‌ಗಳನ್ನು ಟ್ರೇಸ್ ಮಾಡಲಾಗಿದೆ. ಅದೇ ರೀತಿ ಈ ವರ್ಷ 18 ವರ್ಷ ಮೇಲ್ಪಟ್ಟ76 ಪುರುಷರು ಕಾಣೆಯಾಗಿರುವ ಕೇಸ್ ದಾಖಲಾಗಿದೆ. ಪುರುಷ ಕಾಣೆ ಕೇಸ್‌ಗಳಿಗಿಂತ ಮಹಿಳೆ ಕಾಣೆ ಕೇಸ್‌ಗಳೇ ಹೆಚ್ಚಿರುವುದು ಯೋಚಿಸಬೇಕಾದ ಸಂಗತಿಯಾಗಿದೆ.
ಲವ್ ಕೇಸ್ ಜಾಸ್ತಿ: ಇತ್ತೀಚಿನ ದಿನಗಳಲ್ಲಿ ನಿತ್ಯವೂ ಶಾಲಾ ಕಾಲೇಜುಗಳಿಗೆ ಹೋಗುತ್ತಿರುವ ಬಾಲಕಿಯರು, ಯುವತಿಯರ ನಾಪತ್ತೆ ಕೇಸ್‌ಗಳು ಹೆಚ್ಚಾಗಿ ದಾಖಲಾಗುತ್ತಿವೆ. ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮಕ್ಕೆ ಬಿದ್ದು ಅನೇಕ ಯುವತಿಯರು ಹೇಳದೇ ಕೇಳದೇ ಓಡಿ ಹೋಗುತ್ತಿರುವ ಕೇಸ್‌ಗಳು ಹೆಚ್ಚಾಗಿದೆ. ಇಂಥ ಪ್ರಕರಣಗಳಲ್ಲಿ ಪಾಲಕರು ಮರ್ಯಾದೆಗೆ ಅಂಜಿ ಅನೇಕ ದಿನಗಳ ಕಾಲ ಹುಡುಕಾಡಿ ನಂತರ ಪೊಲೀಸರಿಗೆ ದೂರು ಕೊಡುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ನಾಪತ್ತೆಯಾದ ಅನೇಕರು ಇನ್ನೂ ಪತ್ತೆಯಾಗದಿರುವುದು ಆತಂಕಕ್ಕಾಗಿ ವಿಷಯವಾಗಿದೆ. ಅವರು ಎಲ್ಲಿಗೆ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತಿಲ್ಲ. ಇಂಥ ಪ್ರಕರಣಗಳಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕಿದೆ.
ಕನ್ನಡದ ಮೊದಲ ನಿಘಂಟು ಬರೆದ ಕಿಟಲ್ ವಂಶಸ್ಥರು ಹಾವೇರಿಗೆ ಭೇಟಿ
ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ಪ್ರಕರಣ ಯಾವುದೂ ಇಲ್ಲ. ಯುವತಿಯರ ನಾಪತ್ತೆ ಪ್ರಕರಣಗಳಲ್ಲಿ ಹೆಚ್ಚಿನವು ಲವ್ ಕೇಸ್‌ಗಳಿಗೆ ಸಂಬಂಧಿಸಿದ್ದಾಗಿದೆ. ಯಾವುದೇ ಮಿಸ್ಸಿಂಗ್ ಕೇಸ್‌ಗಳಿದ್ದರೂ ನಮ್ಮ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಮಿಸ್ಸಿಂಗ್ ಕೇಸ್‌ಗಳ ಬಗ್ಗೆ ಸಾರ್ವಜನಿಕರು ವಿಳಂಬ ಮಾಡದೇ ದೂರು ನೀಡಿದರೆ ತಕ್ಷಣ ಪತ್ತೆ ಹಚ್ಚಲು ಅನುಕೂಲವಾಗುತ್ತದೆ.
-ಹನುಮಂತರಾಯ, ಎಸ್ಪಿ ಹಾವೇರಿ