Asianet Suvarna News Asianet Suvarna News

ಮಂತ್ರಿಯಾದ್ರೆ ಏನ್ ಬೇಕಾದ್ರೂ ಮಾಡಬಹುದು ಅನ್ನೋದು ಸುಳ್ಳು : ಸಚಿವ ಮಾಧುಸ್ವಾಮಿ

ಉನ್ನತ ಸ್ಥಾನ ದೊರೆತಾಗ ಎಲ್ಲರ ನಿರೀಕ್ಷೆಗೆ, ಎಲ್ಲರ ಮನಸ್ಸಿಗೆ ತಕ್ಕದಾಗಿ ಕೆಲಸ ಮಾಡುವಷ್ಟು ಶಕ್ತಿ ಈ ಸ್ಥಾನದಲ್ಲಿ ಇರುವುದಿಲ್ಲ. ಸ್ವಲ್ಪ ಕಷ್ಟವಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ಮಂತ್ರಿಯಾಗಿದ್ದಾರೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಸುಳ್ಳು ಎಂದು ಸಚಿವ ಮಾಧುಸ್ವಾಮಿ ಹೇಳಿದರು. 

Minster Post Responsibility Is Not An Easy Job Says Minister Madhuswamy
Author
Bengaluru, First Published Sep 9, 2019, 12:37 PM IST

ಹುಳಿಯಾರು (ಸೆ.09):   ಮನುಷ್ಯನಿಗೆ ಉನ್ನತ ಸ್ಥಾನ ದೊರೆತಾಗ ಜವಾಬ್ದಾರಿಯ ಜೊತೆಗೆ ಹೊಣೆಗಾರಿಕೆ ಕೂಡ ಹೆಚ್ಚುತ್ತದೆ. ಅದೇ ರೀತಿ ವಿರೋಧಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಎಲ್ಲರ ನಿರೀಕ್ಷೆಯಂತೆ ಕೆಲಸ ಮಾಡುವುದು ಸುಲಭವಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಹುಳಿಯಾರು ಸಮೀಪದ ಗಾಣಧಾಳುವಿನಲ್ಲಿ  ಜೆಸಿಎಂ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಉನ್ನತ ಸ್ಥಾನ ದೊರೆತಾಗ ಎಲ್ಲರ ನಿರೀಕ್ಷೆಗೆ, ಎಲ್ಲರ ಮನಸ್ಸಿಗೆ ತಕ್ಕದಾಗಿ ಕೆಲಸ ಮಾಡುವಷ್ಟು ಶಕ್ತಿ ಈ ಸ್ಥಾನದಲ್ಲಿ ಇರುವುದಿಲ್ಲ. ಸ್ವಲ್ಪ ಕಷ್ಟವಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ಮಂತ್ರಿಯಾಗಿದ್ದಾರೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಸುಳ್ಳು. ಈ ಸ್ಥಾನ ಸಿಗಲು ನಿಮ್ಮ ಪ್ರೀತಿ-ವಿಶ್ವಾಸ, ನೀವುಗಳು ಮಾಡಿದ ಸಹಾಯವೇ ಕಾರಣ. ಅದಕ್ಕಾಗಿ ನಿಮಗೆ ಆಭಾರಿಯಾಗಿದ್ದೇನೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೋರನಕಣಿವೆಗೆ ಅಪ್ಪರ್‌ ಭದ್ರಾದಿಂದ ನೀರು ತರುವ ಕಾಮಗಾರಿಯ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿದ್ದೇನೆ. ಜಿಲ್ಲೆಯ ಎಲ್ಲಾ ಕಡೆಗೂ ಹೇಮಾವತಿಯಿಂದ ನೀರು ಕೊಡುತ್ತಾ ಬಂದಿದ್ದು, ಈ ಭಾಗಕ್ಕೆ ಹೇಮಾವತಿ ಹರಿಯಲು ಅವಕಾಶವಿಲ್ಲದಿರುವುದರಿಂದ ಹುಳಿಯಾರಿಗೆ ಮಾತ್ರ ಅಪ್ಪರ್‌ ಭದ್ರ ಕೊಡಬೇಕಾಗಿದೆ. ಅಪ್ಪರ್‌ ಭದ್ರಾದಿಂದ ತಿಮ್ಲಾಪುರ ಮತ್ತು ಹುಳಿಯಾರಿಗೆ ಮಾತ್ರ ನೀರು ಹರಿಸಲು ಸಾಧ್ಯವಿದ್ದು ಇನ್ನು ಯಾವೆಲ್ಲಾ ಕೆರೆಗಳಿಗೂ ಹರಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಯೋಜನೆ ರೂಪಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಇದಕ್ಕೆ ಸ್ವಲ್ಪ ಕಾಲಾವಕಾಶದ ಅಗತ್ಯವಿದೆ ಎಂದರು.

ಮಂತ್ರಿಯಾಗುವ ಮೊದಲೇ ಶಾಸಕನಾಗಿ ಗಾಣಧಾಳು ಭಾಗದ ಅನೇಕ ಕೆಲಸಗಳನ್ನು ನಿರ್ವಹಿಸಿದ್ದೇನೆ. ಮಾರುಹೊಳೆ, ರಂಗನಕೆರೆ, ಯಗಚಿಹಳ್ಳಿ ಈ ಭಾಗದಲ್ಲೆಲ್ಲಾ ಕಾಮಗಾರಿಯನ್ನು ಆರಂಭಿಸಿದ್ದೇನೆ. ಎನ್‌ಆರ್‌ಇಜಿ ಮೂಲಕ ರಸ್ತೆ, ಚರಂಡಿ ಮಾಡುವ ಮೂಲಕ ಸ್ಥಳೀಯ ಗ್ರಾಮ ಪಂಚಾಯಿತಿಯವರು ಸಹ ನಮಗೆ ಸಹಕಾರ ನೀಡಿದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಬಹುದು ಎಂದರು.

ರಾಜ್ಯದಲ್ಲಿರುವ ಸುಮಾರು 3600 ಕೆರೆಗಳ ಉಸ್ತುವಾರಿ ಮಾಡಬೇಕಿದ್ದು ನೀರು ಹರಿಸುವ ಮೂಲಕ ಅಂತರ್ಜಲ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಮೇಲಿದ್ದು ನೀರಾವರಿ ಕಡೆ ಹೆಚ್ಚು ಒತ್ತನ್ನು ಕೊಡುತ್ತಿರುವುದಾಗಿ ತಿಳಿಸಿದರು.

ವೋಟು ಹಾಕುವ ಪ್ರಜೆಗಳಿಗೆ ಹತ್ತಿರವಿದ್ದ ಕೆಲವರಲ್ಲಿ ನಾನು ಕೂಡ ಒಬ್ಬನಾಗಿದ್ದು, ಇದೀಗ ಸಚಿವರಾಗಿರುವುದರಿಂದ ರಾಜ್ಯಮಟ್ಟದ ಸಮಸ್ಯೆಗಳಿಗೆ ಗಮನಹರಿಸ ಬೇಕಿರುವುದರಿಂದ ಸಣ್ಣಪುಟ್ಟಸಮಸ್ಯೆಗಳನ್ನು ನಿಮ್ಮ ಹಂತದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್‌, ಲಾಯರ್‌ ಚನಬಸಪ್ಪ, ವೀರಶೈವ ಸಮಾಜದ ಅಧ್ಯಕ್ಷ ನೀಲಕಂಠಪ್ಪ, ವಸಂತಯ್ಯ, ಗುರುವಾಪುರ ಶ್ರೀನಿವಾಸ್‌ ಮೊದಲಾದವರಿದ್ದರು.

ತುಮಕೂರು ಜಿಲ್ಲೆ ಬರಡಾಗುತ್ತಾ ಬಂದಿದ್ದು, ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಕಷ್ಟ.ನಾವು ಯಾವ್ಯಾವ ಕೆರೆಗಳಿಗೆ ನೀರು ತುಂಬಿಸಬಹುದು, ಹಳ್ಳ ಎಲ್ಲೆಲ್ಲಿ ಹರಿಯುತ್ತಿದೆ, ಕೆರೆ ಎಲ್ಲಿದೆ, ಎಷ್ಟುನೀರು ನಿಲ್ಲಿಸಬಹುದು, ಎಂಬುದರ ಬಗ್ಗೆ ಪಟ್ಟಿಮಾಡಲು ಹೇಳಿದ್ದು ನಾಲೆಗಳಿಂದ ಕೆರೆಗೆ ನೀರು ತುಂಬಿಸುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದರು.

Follow Us:
Download App:
  • android
  • ios