ನಾನು ನುಡಿದಂತೆ ನಡೆದುಕೊಂಡಿದ್ದೇನೆ: ಸಚಿವ ಸುಧಾಕರ್
ಎಚ್‌ಎನ್ ವ್ಯಾಲಿ ನೀರು ಹರಿಸಿದ ತೃಪ್ತಿ ನನಗಿದೆ: ಆರೋಗ್ಯ ಸಚಿವ ಸುಧಾಕರ್ ಹೇಳಿಕೆ
ಚಿಕ್ಕಬಳ್ಳಾಪುರ(ಜು.30): ನಾನು ನುಡಿದಂತೆ ನಡೆದುಕೊಂಡಿದ್ದೇನೆ. ಈ ಹಿಂದೆ ಬಂದ ಎಲ್ಲ ರಾಜಕಾರಣಿಗಳೂ ಕೇವಲ ಭರವಸೆಗಳಿಗೆ ಮಾತ್ರ ಸೀಮಿತವಾಗಿದ್ದರು. ಇದರಿಂದ ಜನ ನಂಬಿಕೆಯನ್ನೇ ಕಳೆದುಕೊಳ್ಳುವ ಹಂತ ತಲುಪಿದ್ದರು. ಆದರೆ ನಾನು ಕೊಟ್ಟ ಮಾತಿನಂತೆ ಎಚ್‌ಎನ್ ವ್ಯಾಲಿ ನೀರು ತರುವ ಮೂಲಕ ಜಿಲ್ಲೆಯ ಕೊಳವೆ ಬಾವಿಗಳು ಮಾತ್ರವಲ್ಲ, ತೆರೆದ ಬಾವಿಗಳಲ್ಲೂ ನೀರು ಕಾಣಿಸುತ್ತಿರುವುದು ನನಗೆ ಆತ್ಮ ಸಂತೃಪ್ತಿ ತಂದಿದೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ತಾಲೂಕಿನ ಅಂದಾರ್ಲಹಳ್ಳಿಯಲ್ಲಿ ಆಯೋಜಿಸಿದ್ದ ಉಜ್ವಲ ಭಾರತ ಉಜ್ವಲ ಭವಿಷ್ಯ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿ, ನೈಸರ್ಗಿಕ ಸಂಪತ್ತನ್ನು ನಾವು ಕಳೆದುಕೊಳ್ಳಬಾರದು. ನಮ್ಮ ಪೂರ್ವಿಕರು ನಮಗೆ ನೀಡಿರುವುದನ್ನು ನಾವು ಉಪಯೋಗಿಸಿಕೊಂಡು ಮುಂದಿನ ಪೀಳಿಗೆಗೆ ನಿರ್ಮಲ ಪ್ರಕೃತಿ ಬಿಟ್ಟುಹೋಗಬೇಕು. ಇಲ್ಲವಾದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಮಿತವಾಗಿ ಬಳಸಿ
ನೀರಿನ ಮಿತ ಬಳಕೆಯಂತೆ ವಿದ್ಯುತ್ ಅನ್ನೂ ಮಿತವಾಗಿ ಬಳಸಬೇಕು. ನವೀಕರಿಸಬಹುದಾದ ವಿದ್ಯುತ್‌ನಿಂದ ಪರಿಸರಕ್ಕೆ ಹಾನಿಯಾಗಲ್ಲ. ಆದರೆ ಕಲ್ಲಿದ್ದಿಲಿನಿಂದ ಉತ್ಪಾದಿಸುವ ಥರ್ಮಲ್ ವಿದ್ಯುತ್ ಉತ್ಪಾದನೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಅತಿಯಾದ ಪರಿಸರ ಹಾನಿಯಿಂದ ಅತಿವೃಷ್ಟಿ, ಅನಾವೃಷ್ಟಿಗಳು ಎದುರಾಗುತ್ತಿವೆ. ಪ್ರತಿ ವರ್ಷ ವಿಶ್ವ ತಾಪಮಾನ 1 ರಿಂದ 2 ಡಿಗ್ರಿ ಹೆಚ್ಚಾಗುತ್ತಿದೆ. ಇದು ಪ್ರಕೃತಿ ವಿಕೋಪಗಳಿಗೆ ಕಾರಣವಾಗಲಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ಬಹುದಿನಗಳ ಕನಸು ಈಡೇರುವ ಆಶಾಭಾವನೆ: ಚಿಕ್ಕಬಳ್ಳಾಪುರ- ಗೌರಿಬಿದನೂರು ರೈಲು ಮಾರ್ಗ ಸಮೀಕ್ಷೆ
ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಹೊಸದೇಶದ ಪರಿಕಲ್ಪನೆಯಲ್ಲಿದ್ದಾರೆ. ಸಬಲೀಕರಣ, ಸಮಾನತೆ, ಸಾಮಾಜಿಕ ನ್ಯಾಯ ಆಶಯವಾಗಬೇಕು ಮತ್ತು ಇದೇ ಮೂಲ ತತ್ವವಾಗಬೇಕು ಎಂಬುದು ಬಿಜೆಪಿ ಸರ್ಕಾರಗಳ ಆಡಳಿತ ಮಂತ್ರ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ…, ಎಸ್ಪಿ ಡಿ.ಎಲ….ನಾಗೇಶ್, ಪಟ್ರೇನಹಳ್ಳಿ ಗ್ರಾಪಂ ಅಧ್ಯಕ್ಷ ಟಿ.ಎಸ್.ಜಯಚಂದ್ರ, ಬೀಚಗಾನಹಳ್ಳಿ ಗ್ರಾಪಂ ಅಧ್ಯಕ್ಷ ವೆಂಕಟ ನರಸಪ್ಪ, ಪವರ್‌ಗ್ರೀಡ್ ಪ್ರಧಾನ ವ್ಯವಸ್ಥಾಪಕ ಪಿ.ಶ್ರೀನಿವಾಸ, ಚಿಕ್ಕಬಳ್ಳಾಪುರ ವಿಭಾಗದ ಪಿಎಲ…ಡಿ ಬ್ಯಾಂಕಿನ ನಿರ್ದೇಶಕ ಆನಂದಮೂರ್ತಿ, ಕೋಲಾರ ವೃತ್ತದ ಅಧೀಕ್ಷಕ ಎಂಜಿನಿಯರ್ ಎ.ಆರ್.ಮೃತ್ಯುಂಜಯ, ಮತ್ತಿತರರು ಹಾಜರಿದ್ದರು.
ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಕತ್ತಲಕೂಪದಲ್ಲಿಯೇ ಇದ್ದ 18,374 ಗ್ರಾಮಗಳ 2.86 ಕೋಟಿ ಮನೆಗಳಿಗೆ ಕೇವಲ 987 ದಿನಗಳಲ್ಲಿ ಬೆಳಕು ನೀಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ ಅಂತ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.