ಬೆಂಗಳೂರು(ಜು.25): ಕೊರೋನಾ ನಿಯಂತ್ರಣ ಸಂಬಂಧ ಬೊಮ್ಮನಹಳ್ಳಿ ವಲಯದ ಉಸ್ತುವಾರಿಯಾದ ಸಚಿವ ಸುರೇಶ್‌ ಕುಮಾರ್‌ ಶುಕ್ರವಾರ ಖುದ್ದು ತಾವೇ ಫೀಲ್ಡ್‌ಗಿಳಿದಿದ್ದು, ಕಂಟೈನ್ಮೆಂಟ್‌ ಝೋನ್‌ ಹಾಗೂ ಆಸ್ಪತ್ರೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಹೊಂಗಸಂದ್ರದ 3 ಕಂಟೈನ್ಮೆಂಟ್‌ ವಲಯಗಳಲ್ಲಿ ಪರಿಶೀಲನೆ ನಡೆಸಿದ ಅವರು, ಮನೆ ಮನೆಗೂ ಸ್ವತಃ ತಾವೇ ತೆರಳಿ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಆಗುತ್ತಿದೆಯೇ? ಎಂದು ವಿಚಾರಿಸಿದರು. ಈ ವೇಳೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ಗರಂ ಆದ ಸಚಿವರು, ತಕ್ಷಣ ಅಗತ್ಯ ಸೌಲಭ್ಯ ಒದಗಿಸುವಂತೆ ಪಾಲಿಕೆಯ ಜಂಟಿ ಆಯುಕ್ತ ರಾಮಕೃಷ್ಣಗೆ ಸೂಚಿಸಿದರು. ಮುಂದೆ ಇದೇ ರೀತಿ ತಪ್ಪಾದರೇ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್‌ಗೆ ಹೊಸ ದಿನಾಂಕ ಪ್ರಕಟ

ಬಳಿಕ ಅರಕೆರೆ ಸರ್ಕಾರಿ ಆಸ್ಪತ್ರೆ ಸೇರಿದಂತೆ ತಮ್ಮ ವಲಯದ ವಿವಿಧ ಆಸ್ಪತ್ರೆಗಳಿಗೆ ತೆರಳಿ ಸ್ವ್ಯಾಬ್‌ ಸಂಗ್ರಹ, ಕೊರೋನಾ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆಯ ಕುರಿತು ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ ಶಾಸಕ ಎಂ.ಕೃಷ್ಣಪ್ಪ ನೇತೃತ್ವದಲ್ಲಿ ಸಭೆ ನಡೆಸಿದರು. ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ.ಸತೀಶ್‌ ರೆಡ್ಡಿ, ಪಾಲಿಕೆ ಸದಸ್ಯೆ ಶಾಂತಾ ಬಾಬು, ಬಿಬಿಎಂಪಿ ಅಧಿಕಾರಿಗಳು ಇದ್ದರು.