ನಿಯಂತ್ರಣಕ್ಕೆ ಬಾರದ ಕೊರೋನಾ: ಸಂಜೆ 4ರಿಂದ ಬೆಳಗ್ಗೆ 6 ರವರೆಗೆ ಲಾಕ್‌ಡೌನ್‌ ಜಾರಿ..!

ಇಂದಿನಿಂದ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಜಾರಿ: ಸಚಿವ ಸುರೇಶಕುಮಾರ್‌ ಘೋಷಣೆ| ಕೊರೋನಾಗೆ ಎಚ್ಚರಿಕೆಯೇ ರಾಮಬಾಣ| ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾದರೆ ಸಮಸ್ಯೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಮುಂಜಾಗೃತವಾಗಿ ಸಂತೇಮರಹಳ್ಳಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಜಿಲ್ಲೆಯಲ್ಲಿ 2ನೇ ಕೋವಿಡ್‌-19 ಆಸ್ಪತ್ರೆಯನ್ನಾಗಿ ಮಾಡಲು ನಿರ್ಧಾರ|

Minister Suresh Kumar Says Evening 4 PM to Morning 6 AM Lockdown in Chamarajanagara District

ಚಾಮರಾಜನಗರ(ಜೂ.29): ಕೊರೋನಾ ಕರಿಛಾಯೆ ಜಿಲ್ಲೆಯ ಮೇಲೆ ಬಿದ್ದಿದ್ದು, ಕೊರೋನಾ ವೈರಸ್‌ ಎದುರು ಹೋರಾಡುವುದು ಬಹಳ ದೊಡ್ಡ ಸವಾಲಾಗಿರುವುದರಿಂದ ಜಿಲ್ಲೆಯಲ್ಲಿ ಇಂದಿನಿಂದ(ಜೂ.29) ರಿಂದ ಪ್ರತಿದಿನ ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಲೌಕ್‌ಡೌನ್‌ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ. 

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಕೊರೋನಾ ನಿಯಂತ್ರಣ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಲಾಕ್‌ಡೌನ್‌ ಸಮಯದಲ್ಲಿ ಕೊರೋನಾ ವೈರಸ್‌ ಜಿಲ್ಲೆಯಿಂದ ಸಾವಿರಾರು ಕಿ.ಮೀ ದೂರದಲ್ಲಿದೆ ಎಂದುಕೊಂಡಿದ್ದ ಜಿಲ್ಲೆಯಲ್ಲಿ ಲೌಕ್‌ಡೌನ್‌ ನಂತರ ಕೊರೋನಾ ಮನೆಯ ಒಳಗೆ ಬಂದಂತಾಗಿದೆ. ಆದ್ದರಿಂದ ಮುಂದಿನ ಎರಡು ತಿಂಗಳು ಬಹಳ ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ಹೇಳಿದರು.

ಇಂದಿನಿಂದ 13 ದಿನ ಗುಂಡ್ಲುಪೇಟೆ ಸಂಪೂರ್ಣ ಲಾಕ್‌

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಕೊರೋನಾಗೆ ರಾಮಬಾಣ. ಮಾಸ್ಕ್‌ ಹಾಕುವುದು, ಕೈ ಸ್ವಚ್ಛಗೊಳಿಸುವುದು, ಹೆಚ್ಚು ಜನರು ಇರುವ ಕಡೆ ಹೋಗದಿರುವ ಎಚ್ಚರಿಕೆ ನಿರಂತರವಾಗಿರಬೇಕು. ಜನರಲ್ಲಿ ಕೊರೋನಾ ವೈರಸ್‌ ಬಗ್ಗೆ ಆತಂಕವಿದೆ ಆತಂಕ ಇರಬಾರದು, ಎಚ್ಚರಿಕೆ ಇರಬೇಕು ಎಂದರು.

ಕೊರೋನಾ ವೈರಸ್‌ನಲ್ಲಿ ಐದು ಟಿಗಳು ಪಾತ್ರವಹಿಸಲಿದ್ದು, ಒಂದು ಟೆಸ್ಟಿಂಗ್‌, ಎರಡನೇಯದು ಟ್ರೇಸಿಂಗ್‌, ಮೂರನೇಯದು ಟ್ರ್ಯಾಕಿಂಗ್‌, ನಾಲ್ಕನೆಯದು ಟ್ರೀಟ್‌ಮೆಂಟ್‌, ಐದಯನೇಯದು ಟೆಕ್ನಾಲಜಿ ಈ ಐದು ಟಿಗಳನ್ನು ಬಳಸಿಕೊಂಡು ಕೊರೋನಾ ದೂರ ಮಾಡಬಹುದು ಎಂದರು.

ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ:

ಜಿಲ್ಲೆಯಲ್ಲಿ ಲಾಕ್‌ಡೌನ್‌ ಇದ್ದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ಮಾಡಲಾಗುತಿತ್ತು. ಅದೇ ರೀತಿ ಸೋಮವಾರದಿಂದ ಜಿಲ್ಲೆಯಲ್ಲಿರುವ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ಮಾಡಲು ಆದೇಶಿಸಲಾಗಿದೆ ಎಂದರು.

ಜಿಲ್ಲೆಗೆ ತಮಿಳುನಾಡು ಮತ್ತು ಕೇರಳ ರಾಜ್ಯ ಗಡಿ ಹಂಚಿಕೊಂಡಿದ್ದು, ತಮಿಳುನಾಡು ಮತ್ತು ಕೇರಳ ರಾಜ್ಯಕ್ಕೆ ಸಂಚರಿಸುವ ವಾಹನಗಳಲ್ಲಿ ಹೊರರಾಜ್ಯದವರನ್ನು ಹಣದ ಆಸೆಗೆ ಕರೆದುಕೊಂಡು ಬರುತ್ತಿದ್ದಾರೆ ಆದ್ದರಿಂದ ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಹರಡುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿರುವುದರಿಂದ ತೀವ್ರ ತಪಾಸಣೆಗೆ ತಿಳಿಸಿದ್ದೇನೆ ಎಂದರು.

ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್‌. ಮಹೇಶ್‌, ಶಾಸಕರಾದ ಆರ್‌. ನರೇಂದ್ರ, ನಿರಂಜನ್‌ಕುಮಾರ್‌, ಜಿಪಂ ಅಧ್ಯಕ್ಷೆ ಅಶ್ವಿನಿ, ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ, ಎಸ್ಪಿ ಎಚ್‌.ಡಿ. ಆನಂದ್‌ಕುಮಾರ್‌, ಸಿಇಓ ಬಿ.ಎಚ್‌. ನಾರಾಯಣರಾವ್‌ ಸೇರಿದಂತೆ ಜಿಪಂ ಮತ್ತು ತಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಸಂತೇಮರಹಳ್ಳಿ ಆಸ್ಪತ್ರೆ 2ನೇ ಕೋವಿಡ್‌ ಆಸ್ಪತ್ರೆ

ಕೊರೋನಾ ವೈರಸ್‌ ಸೋಂಕಿತರ ಪ್ರಮಾಣ ಹೆಚ್ಚಾದರೆ ಸಮಸ್ಯೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಮುಂಜಾಗೃತವಾಗಿ ಸಂತೇಮರಹಳ್ಳಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಜಿಲ್ಲೆಯಲ್ಲಿ 2ನೇ ಕೋವಿಡ್‌-19 ಆಸ್ಪತ್ರೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಜೆಎಸ್‌ಎಸ್‌ ಆಸ್ಪತ್ರೆಯೊಂದಿಗೆ ಒಡಂಬಡಿಕೆ:

ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್‌-19 ಆಸ್ಪತ್ರೆಗೆ ಕಳೆದ ಮೂರು ದಿನಗಳಿಂದ ದಿನಕ್ಕೆ 10 ಕೋವಿಡ್‌-19 ದೃಢವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್‌ ಆಸ್ಪತ್ರೆ ಹಾಸಿಗೆಗಳು ಭರ್ತಿಯಾಗಲಿದೆ. ಆದ್ದರಿಂದ ಜಿಲ್ಲಾ ಕೇಂದ್ರದಲ್ಲಿರುವ ಜೆಎಸ್‌ಎಸ್‌ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಜಿಲ್ಲಾ ಖನಿಜ ನಿಧಿಯಲ್ಲಿ ಶೇ.35ರಷ್ಠು ಹಣವನ್ನು ಕೋವಿಡ್‌ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಕೆ ಮಾಡಲು ಅನುಮತಿಯನ್ನು ನೀಡಲಾಗಿದ್ದು, ಜಿಲ್ಲಾ ಖನಿಜ ನಿಧಿಗೆ ಸೇರಿದ 3.30 ಕೋಟಿ ಹಣವನ್ನು ಕೋವಿಡ್‌ಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios