ಸಚಿವ ಜಗದೀಶ್ ಶೆಟ್ಟರ್‌ ಜತೆ ಶಾಸಕರ ಚರ್ಚೆ: ಶ್ರೀರಾಮಲು ಪ್ರತಿಕ್ರಿಯೆ

ಬಜೆಟ್‌ ಹಿನ್ನೆಲೆ ಉಕ ಅಭಿ​ವೃದ್ಧಿ ಕುರಿತ ಚರ್ಚೆ ನಡೆ​ದಿ​ದೆ: ​ಆ​ರೋಗ್ಯ ಸಚಿವ ಶ್ರೀರಾ​ಮು​ಲು| ಮಂಗಳೂರು ಗಲಭೆಯನ್ನು ಕಾಂಗ್ರೆಸ್‌ ಕಾರ್ಯಕರ್ತರು ನಡೆಸಿದ್ದಾರೆ ಎಂಬುವುದಕ್ಕೆ ಪುರಾವೆಗಳಿವೆ|ಬರುವ ಮೂರು ತಿಂಗಳಲ್ಲಿ ವೈದ್ಯರ ಕೊರತೆ ನೀಗಿಸಲಾಗುವುದು|

Minister Sriramulu Talks Over Minister Jagadish Shettar

ವಿಜಯಪುರ(ಫೆ.20): ಹಿರಿಯ ನಾಯಕ, ಸಚಿವ ಜಗದೀಶ ಶೆಟ್ಟರ್‌ ಅವರ ನಿವಾಸದಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವಿಷಯಕ್ಕೆ ರಾಜಕೀಯ ಬಣ್ಣ ಕಲ್ಪಿಸಬೇಕಾಗಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇ​ಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ​ರು, ಜಗದೀಶ ಶೆಟ್ಟರ್‌ ಅವರು ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಹೀಗಾಗಿ ಅವರ ಜೊತೆ ಕುಳಿತು ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಬೇಕಾದ ಅನುದಾನ ಸೇರಿದಂತೆ ಹಲವಾರು ಅಭಿವೃದ್ಧಿ ವಿಷಯಗಳ ಕುರಿತು ಬಜೆಟ್‌ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ್ದಾರೆ. ಅಲ್ಲಿ ಸಂಪೂರ್ಣವಾಗಿ ವಿಕಾಸದ ಕುರಿತು ಚರ್ಚೆ ನಡೆದಿದೆ ಹೊರತು ರಾಜಕೀಯ ಚರ್ಚೆಯಾಗಿಲ್ಲ. ಇದಕ್ಕೆ ರಾಜಕೀಯ ಬಣ್ಣ ಬಳೆಯಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯಮಂತ್ರಿಗಳ ಪುತ್ರರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಸೃಷ್ಟಿ ಮಾಡುತ್ತಿದ್ದಾರೆಯೇ ಹೊರತು ಅದೇ ವಾಸ್ತವವಲ್ಲ. ಇದು ಕಾಂಗ್ರೆಸ್‌ ಹಬ್ಬಿಸುತ್ತಿರುವ ವದಂತಿ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮರ್ಥರು ಅವರು ಯಾರ ಹಸ್ತಕ್ಷೇಪಕ್ಕೂ ಅವಕಾಶ ನೀಡಿಲ್ಲ ಎಂದರು.

ಅಧಿವೇಶನದಲ್ಲಿ ಕಾಂಗ್ರೆಸ್‌ ನಾಯಕರು ಮಂಗಳೂರಿನ ಗೋಲಿಬಾರ್‌ ಬಗ್ಗೆ ಅನವಶ್ಯಕ ಚರ್ಚೆ ನಡೆಸುತ್ತಿದ್ದಾರೆ. ಈ ಗಲಭೆಯನ್ನು ಕಾಂಗ್ರೆಸ್‌ ಕಾರ್ಯಕರ್ತರೇ ಮಾಡಿದ್ದಾರೆ ಎನ್ನುವುದಕ್ಕೆ ಪುರಾವೆ ಇವೆ. ವೀಡಿಯೋ ಇದೆ. ಆದರೂ ಕಾಂಗ್ರೆಸ್‌ನವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಚುನಾವಣೆಯಲ್ಲಿ ವೋಟ್‌ ಬ್ಯಾಂಕ್‌ಗಾಗಿ ಈ ರೀತಿ ಕಾಂಗ್ರೆಸ್‌ ಮಾಡೋದು ಸರಿಯಲ್ಲ ಎಂದರು.

ಪಾಕಿಸ್ತಾನ ಪರ ಘೋಷಣೆ ಕೂಗುವವರ ಪರ ಮಾತನಾಡುತ್ತಿರುವುದು ಸರಿಯಲ್ಲ. ದೇಶದಲ್ಲಿ ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಮೊಳಗಬೇಕೇ ಹೊರತು ಅನ್ಯ ದೇಶದ ಘೋಷಣೆಯಲ್ಲ. ಕಾಂಗ್ರೆಸ್‌ನವರು ಈ ಹಿಂದೆ ಪಿಎಫ್‌ಐ, ಎಸ್‌ಡಿಪಿಐ ಮೇಲಿನ ಪ್ರಕರಣ ಹಿಂದಕ್ಕೆ ಪಡೆದರು. ಆದರೆ ಹಿಂದೂಪರ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಏಕೆ ಹಿಂದಕ್ಕೆ ಪಡೆಯಲಿಲ್ಲ ಎಂದು ಪ್ರಶ್ನಿಸಿದರು.

ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಆನಂದ್‌ಸಿಂಗ್‌ ವಿಚಾರ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ನೂತನ ಜಿಲ್ಲೆ ರಚನೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧ ಎಂದು ಹೇಳಿದರು.

ಗೃಹ ಸಚಿವ ಅಮಿತ್‌ ಶಾ ಜೊತೆಗೆ ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಬರುವ ಮೂರು ತಿಂಗಳಲ್ಲಿ ವೈದ್ಯರ ಕೊರತೆ ನೀಗಿಸಲಾಗುವುದು ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios