ಮೊಳಕಾಲ್ಮುರು[ಡಿ.08]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಕಾಂಗ್ರೆಸಿಗರಲ್ಲ, ವಲಸೆ ಕಾಂಗ್ರೆಸ್ಸಿಗರಾಗಿದ್ದಾರೆ. ಜೆಡಿಎಸ್‌ನಲ್ಲಿದ್ದು ಕಾಂಗ್ರೆಸ್‌ಗೆ ಜಿಗಿದರು, ಕಾಂಗ್ರೆಸ್ ನಿಂದ ಎಲ್ಲಿಗೆ ಜಿಗಿಯುತ್ತಾರೆಂದು ಗೊತ್ತಿಲ್ಲ. ಅವರಿಗೆ ಈಗ ಅಧಿಕಾರ ಬೇಕಾಗಿದೆ. ಮುಖ್ಯಮಂತ್ರಿ ಆಗುತ್ತೀರಿ ಎಂದು ಬೇರೆ ಪಕ್ಷದವರು ಕರೆದರೆ ಅವರ ಹಿಂದೆಯೇ ಹೋಗುತ್ತಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಬಾಂಡ್ರಾವಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಡಿಸಿಎಂ ಮಾಡಲಿಲ್ಲ ಎಂದು ಕಾಂಗ್ರೆಸ್‌ಗೆ ಬಂದರು. ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ, ವಿರೋಧ ಪಕ್ಷದ ನಾಯಕ ಮಾಡಲ್ಲ ಎಂದರೆ ಬೇರೆ ಪಕ್ಷಕ್ಕೆ ಜಿಗಿಯಲೂ ರೆಡಿ ಇರ್ತಾರೆ. ಅವರು ಯಾವುದೇ ಸಿದ್ಧಾಂತದಿಂದ ಬಂದವರಲ್ಲ. 

ಪಕ್ಷದಿಂದ ಪಕ್ಷಕ್ಕೆ ಜಿಗಿದು ರಾಜಕಾರಣ ಮಾಡಿದವರು. ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ ಅಲ್ಲ. ಇರುವೆ ಕಟ್ಟಿದ ಹುತ್ತಕ್ಕೆ ಹಾವು ಸೇರಿಕೊಂಡಂತೆ ಸೇರಿ ಹುತ್ತವನ್ನೇ ನಾಶ ಮಾಡುವ ವ್ಯಕ್ತಿ ಎಂದು ಲೇವಡಿ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದು, ಕೆಲಸ ಮಾಡಿದ್ರೆ ಸಾಕು. ವಿರೋಧ ಪಕ್ಷದಲ್ಲಿದ್ದು ಒಳ್ಳೆ ಕೆಲಸ ಮಾಡುತ್ತಾರೆ ಅಂತ ಜನ ಅಲ್ಲಿ ಕೂರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬರುವುದಾಗಿ ರಮೇಶ್ ಜಾರಕಿಹೊಳಿ ಹೇಳಿರಬಹುದು. ಹಲವಾರು ವರ್ಷಗಳಿಂದಲೂ ಅವರ ಸ್ನೇಹ ಚೆನ್ನಾಗಿದೆ. ಮತ್ತೆ ಬಿಜೆಪಿಯವರು ಅಪರೇಷನ್ ಕಮಲ ಮಾಡಿದ್ರೆ, ಬಿಜೆಪಿಯವರನ್ನು ಅಟ್ಟಿಸಿಕೊಂಡು ಹೊಡೆಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.  ಇಡೀ ದೇಶದಲ್ಲಿ ಕಾಂಗ್ರೆಸ್‌ನವರನ್ನು  ಜನ ಅಟ್ಟಿಸಿಕೊಂಡು ಹೊಡೆದಿದ್ದಾರೆ. ಯಾವುದೇ ರಾಜ್ಯದಲ್ಲಿ ಅವರಿಗೆ ಬಹುಮತ ಸಿಗುವ ಸನ್ನಿವೇಶವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಅಸ್ತಿತ್ವದಲ್ಲಿರುವುದಿಲ್ಲ ಎಂದು ಹೇಳಿದರು. 

ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆಯಾಗಿದೆ. 7 - 8 ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಅಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯದ ಜನ ಹೆಚ್ಚು ಮತದಾನ ಮಾಡಿದ್ದಾರೆ. ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಮತದಾರರೆಲ್ಲರೂ 12 - 13  ಕ್ಷೇತ್ರಗಳಲ್ಲಿ ಗೆಲ್ಲಲು ಕಾರಣವಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೈದಾರಾಬಾದಿನಲ್ಲಿ ಪಶು ವೈದ್ಯೆಯ ಮೇಲಿನ ಅಮಾನುಷವಾಗಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈವೇಳೆ ವಿಶ್ವನಾಥ್ ಸಜ್ಜನರ್ ಎಂಬ ಅಧಿಕಾರಿ ಎನ್ ಕೌಂಟರ್ ಮಾಡಿದ್ದು, ದೇಶವೇ ಕೊಂಡಾಡುತ್ತಿದೆ. ಮುಂದೆ ಇಂತಹ ಪ್ರಕರಣ ನಡೆಯದಂತೆಮುನ್ನೆಚ್ಚರಿಕೆ ವಹಿಸುವಂತ ಕೆಲಸ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.