ರಾಮನಗರ(ಏ.20): ಪ್ರಸಕ್ತ ಸಾಲಿ​ನಲ್ಲಿ ರೈತ​ರಿಗೆ 13 ಸಾವಿರ ಕೋಟಿ ರು. ಮೊತ್ತ​ದಲ್ಲಿ ಬೆಳೆ ಸಾಲ ನೀಡಲು ಯೋಜನೆ ರೂಪಿ​ಸು​ವಂತೆ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡ​ಲಾ​ಗಿದೆ ಎಂದು ಸಹ​ಕಾರ ಸಚಿವ ಎಸ್‌.ಟಿ.​ಸೋ​ಮ​ಶೇ​ಖರ್‌ ತಿಳಿ​ಸಿ​ದ್ದಾರೆ. 

ನಗ​ರದ ಕೃಷಿ ಉತ್ಪನ್ನ ಮಾರು​ಕಟ್ಟೆಗೆ ಭಾನು​ವಾರ ಬೆಳ​ಗಿನ ಜಾವ ಭೇಟಿ ನೀಡಿ ಪರಿ​ಶೀ​ಲನೆ ನಡೆಸಿ ರೈತರೊಂದಿಗೆ ಚರ್ಚಿಸಿದ ತರು​ವಾಯ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಇನ್ನೆರಡು ದಿನಗಳಲ್ಲಿ ರೈತರಿಗೆ ಸಾಲ ನೀಡುವ ಬಗ್ಗೆ ಗೈಡ್‌ಲೈಸ್ಸ್‌ ವಿಧಿಸಿ ಆದೇಶ ಹೊರಡಿಸಲಾಗುವುದು ಎಂದರು.

ಕೆಲವು ಹಣ್ಣು ಮತ್ತು ತರಕಾರಿಗಳನ್ನು ಹೋಟೆಲ್‌ಗಳಿಗೆ ಮಾರಾಟ ಮಾಡಲು ರೈತರು ಬೆಳೆದಿರುತ್ತಾರೆ. ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗದ ಪ್ರಕರಣಗಳಿದ್ದರೆ, ಅವುಗಳಿಗೆ ಮಾನ್ಯ ಮುಖ್ಯಮಂತ್ರಿಗಳೊಅದಿಗೆ ಚರ್ಚಿಸಿ ಕೃಷಿ ಇಲಾಖೆಯಿಂದ ಸರ್ವೆ ಮಾಡಿಸಿ ಬೆಳೆ ಪರಿಹಾರ ಕೊಡಿಸಲಾಗುವುದು ಎಂದರು.

ತಬ್ಲಿಘಿಗಳಿಂದ ಕರ್ನಾಟಕದ ಮತ್ತೊಂದು ಜಿಲ್ಲೆಗೆ ತಗುಲಿದ ಕೊರೋನಾ ನಂಜು..!

ಲಾಕ್‌ಡೌನ್‌ ಸಡಿಲಿಕೆ ಕುರಿತು ಮುಖ್ಯಮಂತ್ರಿಗಳು ನಾಳೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈಗಾಗಲೇ ಕೃಷಿ ಕ್ಷೇತ್ರಕ್ಕೆ ಸಂಪೂರ್ಣ ಸಡಿಲಿಕೆ ನೀಡಲಾಗಿದೆ. ಈಗ ರೈತರಿಗೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ, ಇಡೀ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಬೇಕು. ಕಟ್‌ಪೀಸ್‌ ಮಾಡಿ ಮಾರುವಂತಿಲ್ಲ.
ರೈತರಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ. ಗ್ರೀನ್‌ ಪಾಸ್‌ ಪಡೆದು ಬೆಂಗಳೂರಿನಲ್ಲಿ ಮಾರಾಟ ಮಾಡಬಹುದು. ಬೆಂಗಳೂರಿನಲ್ಲಿ 1400 ಅಪಾರ್ಟ್‌ಮೆಂಟ್‌ಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಹಾಪ್‌ ಕಾಮ್ಸ್‌ ಗಳಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದ ವಿವಿಧ ಎಪಿಎಂಸಿಗಳಿಗೆ ಭೇಟಿ ನೀಡಿದಾಗ ರೈತರು ದಪ್ಪ ಮೆಣಸಿನಿಕಾಯಿ, ನಿಂಬೆಹಣ್ಣು ಸೇರಿದಂತೆ ಎರಡು ಮೂರು ತರಕಾರಿ ಮಾರಾಟ ನಿರೀಕ್ಷೆಯಂತೆ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ಅವುಗಳ ಮಾಹಿತಿಯನ್ನು ಪಡೆಯಲಾಗಿದೆ. ರೈತರಿಗೆ ಸಹಾಯಹಸ್ತ ನೀಡಲು ಮುಂದಾಗಿರುವ ರಾಜಕಾರಣಿಗಳು, ಶಾಸಕರು ಹಾಗೂ ಇನ್ನಿತರ ಸಮಾಜ ಸೇವಕರಿಗೆ ಮಾಹಿತಿ ನೀಡಿ ಅವುಗಳನ್ನು ರೈತರಿಂದ ಖರೀದಿಸುವ ಕೆಲಸ ಸಹ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಎ. ಶೆಟ್ಟಿ, ಸೇರಿದಂತೆ ಇನ್ನಿತರ ಅದಿಕಾರಿಗಳು ಉಪಸ್ಥಿತರಿದ್ದರು.