ಹುಬ್ಬಳ್ಳಿ(ಡಿ.11): ಬಿಜೆಪಿಯಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಸಚಿವ ಸ್ಥಾನ ನೀಡುವಂತೆ ಯಾರಿಂದಲೂ ಬೆದರಿಕೆ ಇಲ್ಲ. ರಾಜ್ಯದಲ್ಲಿ ಸುಭದ್ರ ಸರ್ಕಾರ ಮುಂದುವರೆಯಲಿ ಎಂಬುದು ಜನತೆಯ ಆಶಯವಾಗಿದೆ. ನಮ್ಮ ನಿರೀಕ್ಷೆ ಮೀರಿ ಬಿಜೆಪಿಗೆ ದೊಡ್ಡ ಗೆಲವು ಸಿಕ್ಕಿದೆ. ಗೆದ್ದವರಿಗೆ ನಾವು ಮಾತು ಕೊಟ್ಟಂತೆಯೇ ನಡೆದುಕೊಳ್ಳುತ್ತೇವೆ. ಸೋತವರ ಬಗ್ಗೆಯೂ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಮತ್ತು ಪೌರಾಡಳಿತ ಸಚಿವ ಆರ್. ಅಶೋಕ ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಜ್ಯೋತಿಷ್ಯದ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿಯೇ ಮುಂದುವರೆಯಬೇಕು. ಅವರು ಈವರೆಗೂ ಎಲ್ಲೇ ಹೋದ್ರೂ ಪಕ್ಷವನ್ನ ಭಾಗ ಮಾಡಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್‌ನಲ್ಲಿ ಮೂರು ಭಾಗ ಮಾಡಲಿದ್ದಾರೆ. ಅವರು ಬರೀ ಬುರುಡೆ ಬಿಡುತ್ತಾರೆ. ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿ ಮನೆಗೆ ಹೋಗುವುದು ಒಳಿತು ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರನ್ನ ಮತ್ತೆ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ಶರತ್ ಬಚ್ಚೇಗೌಡ ಅವರು ಮಾತೃ ಪಕ್ಷ ಬಿಟ್ಟು ಹೋಗಿದ್ದು ತಾಯಿಗೆ ಅನ್ಯಾಯ ಮಾಡಿದಂತೆ. ಸಂಸದ ಬಿ.ಎನ್.ಬಚ್ಚೇಗೌಡ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳಬೇಕಿತ್ತು. ಆದ್ರೆ ಅವರು ಎಲ್ಲಿಯೂ ಪ್ರಚಾರದಲ್ಲಿ ಭಾಗಿಯಾಗಿಲ್ಲ. ನಮ್ಮ ಪಕ್ಷ ಅಶಿಸ್ತನ್ನ‌ ಎಂದೂ ಸಹಿಸಲ್ಲ. ಅವರ ನಡೆಯನ್ನ ಪಕ್ಷದ ವರಿಷ್ಠರು ಗಮನಿಸಿದ್ದಾರೆ. ವರಿಷ್ಠರು ಅವರು ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. 

ಈಗ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಗೆ ಸ್ಪಷ್ಟ  ಬಹುಮತವಿದೆ ಪಕ್ಷಕ್ಕೆ ಯಾರನ್ನೂ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.