ಬೀದರ್(ಜ.30): ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಸಭೆ ಸಮಾರಂಭಗಳನ್ನು ನಡೆಸಿ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಕ್ಕೂ ಒತ್ತು ಕೊಡುವುದಾಗಿ ತಿಳಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. 

ಅದರಂತೆ ಸಚಿವರು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರೊಂದಿಗೆ ಜ. 29ರಂದು ಹೈದರಾಬಾದಿನ ಅಲ್ಫಾ ಪ್ಯಾಕೇಜಿಂಗ್ ಕಂಪನಿಗೆ ಭೇಟಿ ನೀಡಿ ಇನ್ವೆಷ್ಟ್ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉದ್ದಿಮೆದಾರರನ್ನು ಆಹ್ವಾನಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಫಾ ಕಂಪನಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ವಿವರ ಪಡೆದರು. ಬಳಿಕ ಹೈದ್ರಾಬಾದ್‌ನ ವಿವಿಧ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮತ್ತು ಸಿಇಓಗಳ ಜೊತೆಗೆ ಸಭೆ ನಡೆಸಿದರು. 
ಇನ್‌ವೆಸ್ಟ್ ಕರ್ನಾಟಕ ಯೋಜನೆಯಡಿ ಬೀದರ್‌ ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವಂತೆ ಇದೇ ವೇಳೆ ಸಚಿವರು ಕೈಗಾರಿಕೋದ್ಯಮಿಗಳಿಗೆ ಆಹ್ವಾನಿಸಿದರು. ಬೀದರ್ ಜಿಲ್ಲೆಯಿಂದ ಉತ್ತಮ ರೈಲ್ವೇ ಸಂಪರ್ಕ ಸೌಲಭ್ಯವಿದೆ. ಕೆಲವೇ ದಿನಗಳಲ್ಲಿ ಉಡಾನ್ ಯೋಜನೆಯಡಿ ವಿಮಾನಗಳು ಓಡಾಡಲಿವೆ. ಕೈಗಾರಿಕೆಗಳ ಅಭಿವೃದ್ಧಿಗೆ ಸೂಕ್ತ ವಾತಾವರಣ ಇಲ್ಲಿದೆ. ನಿರುದ್ಯೋಗವನ್ನು ತಗ್ಗಿಸಿ, ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೀದರ್ ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಆರಂಭಿಸಬೇಕು ಎಂದು ವಿವಿಧ ಕಂಪನಿಗಳಿಗೆ ಮನವಿ ಮಾಡಿದರು. 

ಬೀದರ್ ಜಿಲ್ಲೆಯಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣವಿದೆ ಎಂದು ಸಚಿವರು ತಿಳಿಸಿದ ಬಳಿಕ, ನಾಲ್ಕಾರು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು, ಬೀದರ್ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದಾಗಿ ಪ್ರತಿಕ್ರಿಯಿಸಿದರು. ಈ ವೇಳೆ ಬೀದರ್ ಸಂಸದ ಭಗವಂತ ಖೂಬಾ, ಕಲಬುರಗಿ ಸಂಸದ ಉಮೇಶ ಜಾಧವ ಹಾಗೂ ಇತರರು ಉಪಸ್ಥಿತರಿದ್ದರು.