ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿ: ಸಚಿವ ಚವ್ಹಾಣ್
* ಮೂಕ ಪ್ರಾಣಿಗಳ ರಕ್ಷಣೆ ಪಶುವೈದ್ಯರು ಹಾಗೂ ಅಧಿಕಾರಿಗಳ ಜವಾಬ್ದಾರಿ
* ಪ್ರತಿ ಜಿಲ್ಲೆಯಿಂದ 10 ಸಾವಿರ ಗೋವುಗಳನ್ನು ರಕ್ಷಿಸಬೇಕು
* ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲೂ ಗೋಶಾಲೆ ಸ್ಥಾಪನೆ
ಹೊಸಪೇಟೆ(ಸೆ.01): ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಕ್ರಮ ಕಸಾಯಿಖಾನೆ ಹಾಗೂ ಗೋ ಸಾಗಾಣಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ನಗರದ ಮುನ್ಸಿಪಲ್ ಮೈದಾನದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಸಮರ್ಪಕ ತಿಳಿವಳಿಕೆ ನೀಡಬೇಕು. ಜತೆಗೆ ಇಲಾಖೆಯ ಸೇವಾ ಸೌಲಭ್ಯಗಳ ಕುರಿತು ಪ್ರತಿಯೊಂದು ಗ್ರಾಮಗಳಿಗೆ ತೆರಳಿ ರೈತರಿಗೆ ಅರಿವು ಮೂಡಿಸಬೇಕು ಎಂದರು.
ಅಧಿಕಾರಿಗಳ ತರಾಟೆ:
ಮೂಕ ಪ್ರಾಣಿಗಳ ರಕ್ಷಣೆಯನ್ನು ಪಶುವೈದ್ಯರು ಹಾಗೂ ಅಧಿಕಾರಿಗಳು ಮಾಡಬೇಕು. ಕೆಲಸ ಮಾಡಲು ಆಸಕ್ತಿ ಇಲ್ಲವೆಂದರೆ ಇಲಾಖೆ ಬಿಟ್ಟು ಹೋಗಬಹುದು ಎಂದರು. ಕೂಡ್ಲಿಗಿ ಸಹಾಯಕ ನಿರ್ದೇಶಕ ವಿನೋದ್‌ಗೆ ಗೋ ಹತ್ಯೆ ನಿಷೇಧ ಕುರಿತು ಪ್ರಶ್ನಿಸಿದ ಸಚಿವರು, ಹೊಸ ಹಾಗೂ ಹಳೇ ಕಾಯ್ದೆ ಬಗ್ಗೆ ಅರಿತುಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಹೊರರಾಜ್ಯದಿಂದ ಗೋವು, ಗೋಸಾಗಣೆ ತಡೆಯಿರಿ
ಮೂಕಪ್ರಾಣಿಗಳ ರಕ್ಷಣೆಯಾಗಬೇಕು. ಕಸಾಯಿಖಾನೆಗೆ ಹೋಗಬಾರದು ಎಂಬ ಸದುದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರೈತರಲ್ಲಿ ಜಾಗೃತಿ ಮೂಡಿಸಬೇಕು. ಗೋಹತ್ಯೆ ನಿಷೇಧಕ್ಕೆ ಪೊಲೀಸ್ ಇಲಾಖೆಯ ಸಹಕಾರ ಮುಖ್ಯವಾಗಿದೆ. ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನೆರವಿನೊಂದಿಗೆ ರಾಜ್ಯದಲ್ಲಿ 7 ಸಾವಿರ ಗೋವುಗಳನ್ನು ರಕ್ಷಿಸಲಾಗಿದೆ ಎಂದರು.
10 ಸಾವಿರ ಕರೆಗಳು:
ಇಡೀ ದೇಶದಲ್ಲೇ ಮೊದಲ ಬಾರಿ ಇಲಾಖೆಯಲ್ಲಿ ಆರಂಭಿಸಲಾಗಿರುವ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಂ)ಗೆ ಕಳೆದ ಒಂದೇ ತಿಂಗಳಲ್ಲಿ 10 ಸಾವಿರ ಕರೆಗಳು ರೈತರಿಂದ ಬಂದಿವೆ. ಅವುಗಳಲ್ಲಿ ಶೇ. 85ರಷ್ಟು ಇತ್ಯರ್ಥಪಡಿಸಲಾಗಿದೆ ಎಂದರು.
ರೈತರು ಕರೆ ಮಾಡಿದರೂ ಅಧಿಕಾರಿಗಳು ಮೊಬೈಲ್‌ಗಳನ್ನು ಸ್ವೀಚ್ ಆಫ್ ಮಾಡಿರುತ್ತಾರೆ ಎಂಬ ದೂರುಗಳು ವಾರ್ ರೂಂಗೆ ಬಹಳಷ್ಟುಬಂದಿವೆ. ಹೀಗಾಗಿ, ಯಾವುದೇ ಕಾರಣಕ್ಕೂ ವೈದ್ಯರು ಹಾಗೂ ಅಧಿಕಾರಿಗಳು ಮೊಬೈಲ್ ಸ್ವೀಚ್ ಆಫ್ ಮಾಡಬಾರದು. ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಉಪನಿರ್ದೇಶಕರು ತಾಲೂಕುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಗೋಹತ್ಯೆ ನಿಷೇಧ ಹೋರಾಟಗಾರರ ಕೇಸ್ ವಾಪಸ್?
ಜಿಲ್ಲೆಗೊಂದು ಗೋಶಾಲೆ:
ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವ ಹಿನ್ನೆಲೆ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲು ನಿರ್ಧರಿಸಿದೆ. ಈ ಎರಡೂ ಜಿಲ್ಲೆಯಲ್ಲಿಯೂ 50 ರಿಂದ 100 ಎಕರೆ ವಿಶಾಲ ಪ್ರದೇಶದಲ್ಲಿ ಗೋಶಾಲೆ ಸ್ಥಾಪಿಸಲಾಗುವುದು. ಇದಕ್ಕೆ ಶೀಘ್ರ ಜಾಗ ಕೊಡಿ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿಗೆ ಸಚಿವರು ಸೂಚಿಸಿದರು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಪರಮೇಶ್ವರ ನಾಯಕ್, ಗೋಶಾಲಾ ನಿರ್ಮಾಣಕ್ಕೆ ಹಗರಿಬೊಮ್ಮನಹಳ್ಳಿ ಬಳಿ 10 ಎಕರೆ ಗುರುತಿಸಲಾಗಿದೆ ಎಂದು ಸಚಿವರಿಗೆ ವಿವರಿಸಿದರು. ಇದಕ್ಕೆ ಸಚಿವರು ಬಳ್ಳಾರಿ ಹಾಗೂ ವಿಜಯನಗರಕ್ಕೆ ಪ್ರತ್ಯೇಕ ತಲಾ 50ರಿಂದ 100 ಎಕರೆ ಪ್ರದೇಶದಲ್ಲಿ ಗೋ ಶಾಲೆ ನಿರ್ಮಾಣಕ್ಕೆ ಕ್ರಮವಹಿಸಬೇಕು. ಪ್ರತಿ ಜಿಲ್ಲೆಯಿಂದ 10 ಸಾವಿರ ಗೋವುಗಳನ್ನು ರಕ್ಷಿಸಬೇಕು ಎಂದರು.
ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಪಶುವೈದ್ಯರು ಇದ್ದರು.