ಬೀದರ್(ಜ.27): ಮುಖ್ಯಮಂತ್ರಿ ಯಡಿಯೂರಪ್ಪಜಿ ಬೋಲಾ ಹೈ ಕನ್ನಡಿಗ್, ಕರ್ನಾಟಕ್ ಅಭಿವೃದ್ಧಿ ಕರ್ನೇಕಾ, ಹಮಾರಾ ಎಜುಕೇಶನ್ ಬಡೇಗಾ ಭಾರತ್ ದೇಶ್ ದೌಡೇಗಾ, ಕುಡಿಲ್ಯಾಕ್ ನೀರಿಲ್ಲ ಪೇಡ್ ಲಗಾವೋ ಬೀದರ್ ಬಚಾವೋ, ಮೈ ಮಂತ್ರಿ ಹೋನೆ ಕಾ ಬಾದ್ ಬೀದರ್ ಬದಲಾ ಹೈ. ಹರ್ ತರಫ್ ಅಭಿವೃದ್ಧಿ ಹೋ. ಕರ್ನಾಟಕ ಮಾತಾಕಿ ಜೈ ಎಂದು ಸಚಿವ ಪ್ರಭು ಚವ್ಹಾಣ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

ಭಾನುವಾರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಪ್ರಭು ಚವ್ಹಾಣ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ಹಿಂದಿಯಲ್ಲಿಯೇ ಮಾತನಾಡಿದ್ದಾರೆ. ಕನ್ನಡ ಬಾರದೇ ಇರುವುದು ಸಚಿವ ಸ್ಥಾನಕ್ಕೆ ಕುತ್ತು ತರುವಂಥ ಸನ್ನಿವೇಶದಲ್ಲಿ ಎಲ್ಲೆಡೆ ಕನ್ನಡದಲ್ಲಿಯೇ ಮಾತನಾಡುವದನ್ನು ರೂಢಿಸಿಕೊಂಡು ಗಮನಸೆಳೆದಿದ್ದ ಪ್ರಭು ಚವ್ಹಾಣ ಅವರು ಸಚಿವರಾದ ಮೇಲೆ ವೇದಿಕೆಗಳಲ್ಲಿ ಕನ್ನಡ ಭಾಷಣ ಮಾಡುತ್ತಲೇ ಹೆಸರಾಗಿದ್ದರಾದರೆ, ಇದೀಗ ಗಣರಾಜ್ಯೋತ್ಸವದ ದಿನದಂದು ಹಿಂದಿ ಹೇರಿಕೆಯಂತೆ ವರ್ತಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕನ್ನಡಿಗ್, ಕರ್ನಾಟಕ್ ಅಭಿವೃದ್ಧಿ ಕರ್ನೇಕಾ ಸಿಎಂ ಬೋಲಾ, ಹಮಾರಾ ಎಜುಕೇಷನ್ ಬಡೇಗಾ ಭಾರತ್ ದೇಶ್ ದೌಡೇಗಾ ಎಂದು ಹೇಳುತ್ತಿದ್ದಾಗ ಅವರಲ್ಲಿ ಕನ್ನಡದ ಜಾಗೃತಿಯನ್ನು ಪ್ರಶ್ನಿಸುವಂತಿತ್ತು. ಸಂಪೂರ್ಣ ಭಾಷಣವನ್ನು ಸಾಮಾನ್ಯವಾಗಿ ಕನ್ನಡದಲ್ಲಿಯೇ ತಯಾರಿಸಲಾಗುತ್ತದೆಯಾದರೆ ಸಂಬಂಧಿತರು ಈ ಬಾರಿ ಹಿಂದಿ ಭಾಷೆಯಲ್ಲಿಯೂ ಭಾಷಣದ ಪ್ರತಿಯನ್ನು ತಯಾರಿಸಿದ್ದು ಸಚಿವರ ನಿರ್ದೇಶನ, ಕನ್ನಡ ಭಾಷಣದಿಂದ ದೂರ ಉಳಿಯುವ ಅವರ ಮುಂದಾಲೋಚನೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಿತ್ತು. 

ಅಷ್ಟಕ್ಕೂ ಆಗೊಮ್ಮೆ ಈಗೊಮ್ಮೆ ಎಂಬಂತೆ ಕನ್ನಡದ ಪದಗಳನ್ನು ಬಳಸಿದರಾದರೂ ಕನ್ನಡದಲ್ಲಿ ಮಾತನಾಡಿ ಎಂದು ಚೀಟಿ ಕೊಟ್ಟರೂ ಅದು ಒಂದೆರಡು ಪದ ಬಳಕೆ ನಂತರ ಮತ್ತದೇ ಹಿಂದಿಗೆ ತಿರುಗಿತು. ಇನ್ನು ಕನ್ನಡದಲ್ಲಿ ಭಾಷಣ ಮಾಡಲ್ಲ, ಕನ್ನಡ ಮಾತನಾಡಲ್ಲ ಎಂದೆಲ್ಲ ಆರೋಪಿಸುವವರು ಯಾರು ಅಲ್ಲಿ ತುಟಿ ಪಿಟಕ್ ಎನ್ನಲಿಲ್ಲ, ಅಲ್ಲಿದ್ದ ನಮ್ಮ ಅಪ್ಪಟ ಕನ್ನಡಿಗ ಜನಪ್ರತಿನಿಧಿಗಳ ಬಾಯಲ್ಲಿ ಕನ್ನಡದಲ್ಲಿ ಮಾತಾಡಿ ಎಂದು ಮಾತು ಉದಿರ್ಯಾವು ಎಂದು ಕಾದು ಕುಳಿತರೆ ಅವರ ಬಾಯಲ್ಲಿ ಕಾಜು ಕಿಸ್ಮಿಸ್ ಮತ್ತು ಬಿಸ್ಕಟ್‌ಗಳು ಬಿಡದೇ ಹರಿದಾಡುತ್ತಿದ್ದದ್ದು ಕನ್ನಡದ ಅಳಿವು ಉಳಿವಿನ ಪ್ರಶ್ನೆಯನ್ನು ಗಣರಾಜ್ಯೋತ್ಸವದ ಈ ಸಂದರ್ಭ ಮೂಡಿ ಬಂತು. 

ಅಷ್ಟೇ ಅಲ್ಲ ಗಣರಾಜ್ಯೋತ್ಸವದ ಕಾರ್ಯಕ್ರಮದ ನಂತರ ಸಚಿವರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಅಲ್ಲಿ ರಾಷ್ಟ್ರ ಧ್ವಜಾರೋಹಣದ ನಂತರ ಸುದ್ದಿಗೋಷ್ಠಿಯಲ್ಲಿಯೂ ಕನ್ನಡ ಬಿಟ್ಟು ಹಿಂದಿಯ ಧಾಟಿ ಹಿಡಿದಾಗ ಪತ್ರಕರ್ತರ ಪ್ರಶ್ನೆಯಿಂದ ಎಚ್ಚೆತ್ತು ಕನ್ನಡಕ್ಕೆ ತಿರುಗಿದರು. ಕನ್ನಡ ಸ್ಪಷ್ಟವಾಗಿ ಬಾರದಿದ್ದರೂ ಕನ್ನಡದಲ್ಲಿಯೇ ಮಾತನಾಡಿ ಜನರನ್ನ ಸೆಳೆಯುವ ಭಾಷೆಯನ್ನ ಉಳಿಸುವತ್ತ ಸಚಿವರು ಇನ್ನು ಮುಂದಾದರೂ ಕಲಿಯಲಿ ಎಂಬುವುದು ಕನ್ನಡ ಮನಸ್ಸುಗಳ ಅಂಬೋಣ.