ಬೀದರ್(ಡಿ.27): ಮಕ್ಕಳಿಗೆ ಇಂಗ್ಲಿಷ್ ಓದಲು ಬಾರದಿದ್ದಕ್ಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರು ಶಿಕ್ಷಕರಿಗೆ ಸಖತ್ ಕ್ಲಾಸ್ ತೆಗೆದುಕೊಂಡ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಶಾಲೆಯಲ್ಲಿ ಇಂದು(ಶುಕ್ರವಾರ) ನಡೆದಿದೆ. 

ಇಂದು ಶಾಲಾ ಕೊಠಡಿ ನಿರ್ಮಾಣದ ಶಂಕುಸ್ಥಾಪನೆಗೆಂದು ಪ್ರಭು ಚವ್ಹಾಣ್‌ ಅವರು ವಡಗಾಂವನಲ್ಲಿರುವ ಸರ್ಕಾರಿ ಶಾಲೆಗೆ ಬಂದಿದ್ದರು. ಈ ವೇಳೆ 7ನೇ ತರಗತಿಯ ಕೊಠಡಿಗೆ ತೆರಳಿದ ಸಚಿವರು ವಿದ್ಯಾರ್ಥಿಗಳ ಜತೆ ಮಾತನಾಡಿದ್ದಾರೆ. ಬುಕ್ ನೋಡಿಕೊಂಡು ಇಂಗ್ಲಿಷ್ ಓದಲು ವಿದ್ಯಾರ್ಥಿಗಳಿಗೆ ಸಚಿವರು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಮಕ್ಕಳು ಇಂಗ್ಲಿಷ್ ಓದಲು ತಡಪಡಾಯಿಸಿದ್ದಾರೆ. ಇದರಿಂದ ಕೆಂಡಾಮಂಡಲರಾದ ಪ್ರಭು ಚವ್ಹಾಣ್‌ ಅಲ್ಲಿದ್ದ ಶಾಲಾ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಎಷ್ಟು ಜನ ಶಿಕ್ಷಕರಿದ್ದೀರಾ, ಸರ್ಕಾರಿ ಸಂಬಳ ಪಡೆದುಕೊಂಡು ಏನು ಕೆಲಸ ಮಾಡುತ್ತೀರಿ ನೀವೆಲ್ಲಾ ಎಂದು ಗರಂ ಆಗಿದ್ದಾರೆ. ಸಚಿವರ ಮಾತಿಗೆ ಶಿಕ್ಷಕರು ಕೆಲ ಕ್ಷಣ ತಬ್ಬಿಬ್ಬಾಗಿದ್ದಾರೆ.