ಸಿ ಡಿ ಇದೆ ಎಂದು ಬ್ಲಾಕ್‌ಮೇಲ್ ಮಾಡಬೇಡಿ. ಇದ್ದರೆ ತೋರಿಸಿ ಎಂದು ಸಚಿವರೋರ್ವರು ಅಸಮಾಧಾನ ಹೊರಹಾಕಿದ್ದಾರೆ.  ಬ್ಲಾಕ್‌ಮೇಲ್ ಮಾಡುವ ಬದಲು ಬಹಿರಂಗಪಡಿಸಲಿ ಎಂದಿದ್ದಾರೆ. 

ಮಂಡ್ಯ (ಮಾ.07): ಸೀಡಿ ಇದ್ದರೆ ತಂದು ತೋರಿಸಲಿ, ಸಾರ್ವಜನಿಕರೆದುರು ಸತ್ಯಾಂಶ ಬಹಿರಂಗಪಡಿಸಲಿ. ಅದನ್ನು ಬಿಟ್ಟು ಸುಮ್ಮನೆ ಅವರಿದಿದೆ, ಇವರದಿದೆ ಎಂದು ಹೇಳಿಕೊಂಡು ಬ್ಲಾಕ್‌ಮೇಲ್‌ ಮಾಡುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಸೀಡಿಗೆ ಭಯಪಟ್ಟು ನಾವು ನ್ಯಾಯಾಲಯಕ್ಕೆ ಮೊರೆ ಹೋಗಿಲ್ಲ. ಅಶ್ಲೀಲತೆ ಪ್ರದರ್ಶಿಸುವುದರಿಂದ ವ್ಯಕ್ತಿ ಗೌರವ ಹಾಗೂ ಕುಟುಂಬದವರಿಗೆ ನೋವಾಗುತ್ತದೆ. ವ್ಯಕ್ತಿ ಗೌರವ ಕಳೆಯುವ ಸಂದರ್ಭದಲ್ಲಿ ಕಾನೂನಿನ ರಕ್ಷಣೆ ಪಡೆಯಬೇಕಾಗುತ್ತದೆ. ಅದಕ್ಕಾಗಿ ನ್ಯಾಯಾಲಯಕ್ಕೆ ಹೋಗಿದ್ದೇವೆ. ಕೇವಲ ಸಚಿವರು ಮಾತ್ರವಲ್ಲ. ರಾಜಕಾರಣಿಗಳೆಲ್ಲರೂ ಹೋಗುತ್ತಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಸೋಷಿಯಲ್‌ ಮೀಡಿಯಾಗಳಿಂದ ಅಪಪ್ರಚಾರ:

ಚಿಕ್ಕ ಚಿಕ್ಕ ಮೀಡಿಯಾಗಳು ಹಾಗೂ ಸೋಷಿಯಲ್‌ ಮೀಡಿಯಾಗಳು ಪಿತೂರಿ ಮಾಡಿ ಜನಪ್ರತಿನಿಧಿಗಳ ಗೌರವ ಕಳೆಯುವ ಕೆಲಸ ಮಾಡುತ್ತಿವೆ. ಹೆಸರು ಇಲ್ಲದೆ ಯಾರದೋ ಫೋಟೋ ಹಾಕಿ ಸುದ್ದಿ ಮಾಡುತ್ತಿವೆ. ಇವರ ವೀಡಿಯೋ ಇದೆ ಎಂದು ಹೇಳಿ ಫೋಟೋ ಹಾಕಿ ಗೌರವ ಕಳೆಯುವುದು ಸರಿಯಲ್ಲ. ಸತ್ಯಾಂಶ ಇಲ್ಲದೆ ಇವೆಲ್ಲವನ್ನೂ ಪ್ರಚಾರ ಮಾಡಬಾರದು. ಇಂತಹ ಸುಳ್ಳು ಪ್ರಚಾರ ಮಾಡುವುದನ್ನು ತಡೆಯುವ ಸಲುವಾಗಿ ಕೋರ್ಟ್‌ ಹೋಗಿದ್ದೇವೆ. ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ. ಅದಕ್ಕೋಸ್ಕರ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದರು.

ಗ್ರಾಫಿಕ್ಸ್‌ ಇದ್ದರೂ ಇರಬಹುದು:

ಸತ್ಯಾಂಶ ಮುಚ್ಚಿಡಿ ಎಂದು ನಾವು ಹೇಳುತ್ತಿಲ್ಲ. ಸತ್ಯಾಂಶವಿದ್ದರೆ ಅದನ್ನು ಹೊರಗೆ ಬಿಡಿ ಎಂದಾಗ, ರಮೇಶ್‌ ಜಾರಕಿಹೊಳಿ ಅವರ ವಿಡಿಯೋ ಸುಳ್ಳೇ ಎಂದು ಪತ್ರಕರ್ತರು ಪ್ರಶ್ನಿಸಿದರು. ನಾನು ರಮೇಶ್‌ ಜಾರಕಿಹೊಳಿ ಅವರ ವಿಚಾರ ಮಾತನಾಡುತ್ತಿಲ್ಲ. ಫಿಲ್ಮ್‌ ಇಂಡಸ್ಟ್ರೀನಲ್ಲಿ ಏನು ಬೇಕಾದರೂ ಮಾಡಬಹುದು. ಈ ವಿಡಿಯೋ ಕೂಡ ಅದೇ ರೀತಿ ಇರಬಹುದಲ್ಲವೇ. ಅದರಲ್ಲೂ ಗ್ರಾಫಿಕ್ಸ್‌ ಇದ್ದರೂ ಇರಬಹುದು. ಅದರ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ನನ್ನ ಮಕ್ಕಳು, ಮೊಮ್ಮಕ್ಕಳು BJPಯಲ್ಲೇ ಇರ್ಬೇಕೆಂದು ವಿಲ್ ಬರೆದಿಡ್ತೇನೆಂದ ಕರ್ನಾಟಕದ ಸಚಿವ ..

ಸೀಡಿ ವಿಚಾರದಲ್ಲಿ ನನ್ನನ್ನೂ ವೈಯಕ್ತಿಕವಾಗಿ ಟಾರ್ಗೆಟ್‌ ಮಾಡಿದ್ದರೂ ಮಾಡಿರಬಹುದು. ಇದು ರಾಜಕಾರಣ. ಯಾರು ಯಾರನ್ನೂ ಟಾರ್ಗೆಟ್‌ ಮಾಡಿರುತ್ತಾರೆಂದು ಹೇಳಲಾಗುವುದಿಲ್ಲ. ಆದರೆ, ನನಗೆ ಆ ಬಗ್ಗೆ ಹೆದರಿಕೆ ಏನೂ ಇಲ್ಲ. ಒಮ್ಮೆ ನಾನೇನಾದರೂ ಹೆದರಿದ್ದರೆ ಮಂಡ್ಯಕ್ಕೆ ಬರುತ್ತಿರಲಿಲ್ಲ ಎಂದರು.

ಅಭಿವೃದ್ಧಿ ಕುರಿತು ಬೇಡಿಕೆ

ಈ ವರ್ಷ ಹಣಕಾಸಿನಲ್ಲಿ ಕಷ್ಟದಲ್ಲಿದ್ದೆವು. ಹಾಗಾಗಿ ಜಿಲ್ಲೆಗೆ ದೊಡ್ಡಮಟ್ಟದ ಅನುದಾನ ಬಿಡುಗಡೆಯಾಗಿಲ್ಲ. ಬಜೆಟ್‌ನಲ್ಲಿ ಸುಮಾರು .2000 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೇಳಿದ್ದೇವೆ. ತವರಿನ ಮಗನಾಗಿರುವ ಸಿಎಂ ಯಡಿಯೂರಪ್ಪನವರು ಹಣ ಕೊಡುವರೆಂಬ ವಿಶ್ವಾಸವಿದೆ ಎಂದು ಬಜೆಟ್‌ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಜಿಲ್ಲೆಯಲ್ಲಿ ಕ್ರಿಕೆಟ್‌ ಮೈದಾನ, ಸ್ಫೋಟ್ಸ್‌ ಕಾಂಪ್ಲೆಕ್ಸ್‌ ನೀಡುವಂತೆ ಸರ್ಕಾರವನ್ನು ಕೇಳಿದ್ದೇನೆ. ನನ್ನ ಅವಧಿಯಲ್ಲಿ ಅದನ್ನು ಮಾಡಿಯೇ ಮಾಡುತ್ತೇನೆ. ಅದಕ್ಕಾಗಿ ಜಾಗ ಹುಡುಕಲಾಗುತ್ತಿದೆ ಎಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದರು.

ಮೈಷುಗರ್‌ ಆರಂಭ ನಿಶ್ಚಿತ

ಪ್ರಸಕ್ತ ಸಾಲಿನಲ್ಲಿ ಮೈಷುಗರ್‌ ಕಾರ್ಖಾನೆಯಲ್ಲಿ ಕಬ್ಬು ಅರೆಯುವುದು ನಿಶ್ಚಿತ. ಒ ಅಂಡ್‌ ಎಂ ಹಾಗೂ ಖಾಸಗೀಕರಣ ಎರಡನ್ನೂ ಮುಂದಿಟ್ಟುಕೊಂಡಿದ್ದೇವೆ. ನಿರ್ವಹಣೆ ಮತ್ತು ಕಾರ್ಯಾಚರಣೆ(ಒ ಅಂಡ್‌ ಎಂ)ಗೆ ಟೆಂಡರ್‌ ಕರೆದು ಆರು ತಿಂಗಳಾಗಿದೆ. ಇದುವರೆಗೂ ಯಾರೂ ಬಂದಿಲ್ಲ. ಮುಂದೇನು ಮಾಡಬೇಕೆಂಬ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಕ್ಕರೆ ಸಚಿವ ಎಂಟಿಬಿ ನಾಗರಾಜ್‌ ಅವರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಒಟ್ಟಿನಲ್ಲಿ ಈ ಸಾಲಿನಲ್ಲಿ ಮೈಷುಗರ್‌ ಕಾರ್ಯಾಚರಣೆ ಪ್ರಾರಂಭಿಸುವುದು ನಿಶ್ಚಿತ ಎಂದು ನಾರಾಯಣಗೌಡ ಭರವಸೆ ನೀಡಿದರು