Asianet Suvarna News Asianet Suvarna News

ನೀರು ಮಿತವಾಗಿ ಬಳಸದಿದ್ದರೆ ಜಲಕಂಟಕ: ಸಚಿವ ಎಂ.ಬಿ.ಪಾಟೀಲ

ಕುಡಿಯಲು, ಕೃಷಿ ಮಾಡಲು, ಕೈಗಾರಿಕೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ನೀರು ಅತೀ ಮುಖ್ಯವಾಗಿದೆ. ಈ ನೀರನ್ನು ಹಿತವಾಗಿ ಮತ್ತು ಮಿತವಾಗಿ ಬಳಸಬೇಕು. ಹನಿ(ಡ್ರಿಪ್) ನೀರಾವರಿ ಪದ್ಧತಿ ಈಗ ಮಹತ್ವ ಪಡೆದಿದ್ದು, ಇದನ್ನು ಅಳವಡಿಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕೃಷಿಗೆ ಅಧಿಕ ನೀರು ಬೇಕಾಗುವ ಬೆಳೆಗಳನ್ನು ನಿಷೇಧಿಸುವ ಪರಿಸ್ಥಿತಿ ಎದುರಾಗಲಿದೆ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ 

Minister MB Patil Talks Over Use of Water grg
Author
First Published Aug 27, 2023, 9:30 PM IST

ವಿಜಯಪುರ(ಆ.27):  ನೀರನ್ನು ಹಿತವಾಗಿ ಮತ್ತು ಮಿತವಾಗಿ ಬಳಸದಿದ್ದರೆ ಮುಂದಿನ ಒಂದು ದಶಕದಲ್ಲಿ ಜಲಸಂಕಷ್ಟ ಎದುರಾಗಲಿದೆ. ಈಗಿನಿಂದಲೇ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಗ್ರಾಮೀಣ ಪುನಶ್ಚೇತನ ಕೇಂದ್ರ ಉದ್ಘಾಟನೆ ಮತ್ತು ಸಾವಯವ ಕೃಷಿ ಪದ್ಧತಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜಯಪುರ: ರಸ್ತೆ ಅಪಘಾತ, ನಾಲ್ಕು ವರ್ಷದ ಹೆಣ್ಣು ಮಗು ಸಾವು

ಕುಡಿಯಲು, ಕೃಷಿ ಮಾಡಲು, ಕೈಗಾರಿಕೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ನೀರು ಅತೀ ಮುಖ್ಯವಾಗಿದೆ. ಈ ನೀರನ್ನು ಹಿತವಾಗಿ ಮತ್ತು ಮಿತವಾಗಿ ಬಳಸಬೇಕು. ಹನಿ(ಡ್ರಿಪ್) ನೀರಾವರಿ ಪದ್ಧತಿ ಈಗ ಮಹತ್ವ ಪಡೆದಿದ್ದು, ಇದನ್ನು ಅಳವಡಿಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕೃಷಿಗೆ ಅಧಿಕ ನೀರು ಬೇಕಾಗುವ ಬೆಳೆಗಳನ್ನು ನಿಷೇಧಿಸುವ ಪರಿಸ್ಥಿತಿ ಎದುರಾಗಲಿದೆ. ಕಬ್ಬು ಬೆಳೆಗಾರರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಅಧಿಕ ಇಳುವರಿಯ ಜೊತೆಗೆ ಆದಾಯವೂ ಹೆಚ್ಚಾಗಲಿದೆ. ಸಕ್ಕರೆ ಕಾರ್ಖಾನೆಗಳಿಗೆ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಸಿಗಲಿದೆ. ಅಲ್ಲದೇ, ಹೆಚ್ಚು ನೀರು ಬಳಕೆಯಿಂದ ಜಮೀನು ಹಾಳಾಗುವುದು ತಪ್ಪಲಿದೆ. ರೈತರಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಅಗತ್ಯವಾಗಿರುವ ಸಲಕರಣೆಗಳನ್ನು ಒದಗಿಸುವ ಹೆಸರಾಂತ ಕಂಪನಿಗಳು ಮತ್ತು ಸಕ್ಕರೆ ಕಾರ್ಖಾನೆಗಳ ಸಹಭಾಗಿತ್ವದಲ್ಲಿ ನೆರವು ಒದಗಿಸಲು ಈ ಗ್ರಾಮೀಣ ಪುನಶ್ಚೇತನ ಕೇಂದ್ರ ಕ್ರಮ ಕೈಗೊಳ್ಳಬೇಕು. ಇದರಿಂದ ನೀರು ಉಳಿತಾಯ ಸಾಧ್ಯ. ಅಲ್ಲದೇ, ಹನಿ ನೀರಾವರಿಗಾಗಿ ರೈತರು ಸಲಕರಣೆಗಳ ಖರೀದಿಗೆ ಖರ್ಚು ಮಾಡುವ ಹಣ ಕೇವಲ ಎರಡು ವರ್ಷಗಳಲ್ಲಿ ಬೇರೆ ಬೇರೆ ರೂಪದಲ್ಲಿ ರೈತರಿಗೆ ಮರಳಲಿದೆ ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿ ಜಮೀನುಗಳಲ್ಲಿ ಅಲ್ಲಲ್ಲಿ ಗುಂಡಿಗಳನ್ನು ತೋಡಿ ಮಳೆ ನೀರು ಸಂಗ್ರಹಿಸಿ ಅಂತರ್ಜಲ ಹೆಚ್ಚು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನಾವು ಅವರಿಗಿಂತಲೂ ಒಂದು ಹೆಜ್ಜೆ ಮುಂದಿಡಲು ನಿರ್ಧರಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಬರುವ 159 ಹಳ್ಳಗಳಿಗೆ ನೀರು ಹರಿಸಿ ಪ್ರತಿ 500 ಮೀಟರಿಗೆ ಒಂದರಂತೆ ಒಟ್ಟು ₹120 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಜಲ ಮರುಪೂರಣವಾಗಿ ಸುಮಾರು 1000 ಕಿ.ಮೀ. ವರೆಗೆ ಅಂತರ್ಜಲ ಹೆಚ್ಚಾಗಲಿದೆ. ಇದಕ್ಕೆ ಪೂರಕವಾಗಿ ಹಳ್ಳಗಳ ಅಕ್ಕಪಕ್ಕದಲ್ಲಿ ಗಿಡಮರಗಳು ಬೆಳೆದು ಪರಿಸರಕ್ಕೂ ನೆರವಾಗಲಿದೆ. ದೇಶಾದ್ಯಂತ ನಮ್ಮ ಕೆರೆಗೆ ನೀರು ತುಂಬಿಸುವ ಯೋಜನೆ ಹೆಸರು ಮಾಡಿದಂತೆ, ಹಳ್ಳಗಳನ್ನು ತುಂಬಿಸುವುದರಿಂದ ಇಡೀ ದೇಶವಷ್ಟೇ ಅಲ್ಲ, ಇಡೀ ವಿಶ್ವ ನಮ್ಮ ಕಡೆ ನೋಡುವಂತೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ನೀರು ನಿರ್ವಹಣೆ ಸಂಘ ರಚಿಸಬೇಕು:

ನಾವೂ ಬದುಕಬೇಕು. ಇತರರಿಗೂ ಬದುಕಲು ಅವಕಾಶ ನೀಡಬೇಕು. ಇದು ಯಶಸ್ವಿಯಾಗಬೇಕಾದರೆ, ನೀರು ಬಳಕೆದಾರರ ಸಂಘಗಳು ರಚನೆ ಆಗಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ಸುಮಾರು 25 ರೈತರನ್ನೊಳಗೊಂಡ ನೀರು ಬಳಕೆದಾರರ ಸಂಘಗಳನ್ನು ರಚಿಸಬೇಕು. ಯುವಕರು ಕೃಷಿಗೆ ಮರಳಬೇಕು, ಮೈಕ್ರೋ ಫೈನಾನ್ಸ್ ಗಳ ಮೂಲಕ ನೆರವು ನೀಡಬೇಕು. ಈಗ ಜಿಲ್ಲೆಯಲ್ಲಿ ಜಲಕ್ರಾಂತಿಯಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಇದನ್ನು ಅರಿತು ಯುವಕರು ಮತ್ತೆ ಕೃಷಿಯ ಕಡೆಗೆ ಮರಳಲು ಯೋಜನೆ ರೂಪಿಸಲಾಗುತ್ತಿದೆ. ಇದರ ಜೊತೆಗೆ ಭೂರಹಿತ ರೈತ ಕಾರ್ಮಿಕರು, ಮಹಿಳೆಯರು ಮತ್ತು ಯುವಕರು ಸ್ವಾವಲಂಬಿ ಬದುಕು ಸಾಗಿಸಲು ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಸೇರಿದಂತೆ ಇತರ ಕೃಷಿ ಸಂಬಂಧಿತ ಯೋಜನೆಗಳನ್ನು ರೂಪಿಸಿ ಮೈಕ್ರೋ ಫೈನಾನ್ಸ್ ವ್ಯವಸ್ಥೆಯ ಮೂಲಕ ನೆರವು ನೀಡುವ ಗುರಿ ಇದೆ ಎಂದು ಅವರು ತಿಳಿಸಿದರು. ಇವರಿಗೆ ಮೈಕ್ರೋ ಫೈನಾನ್ಸಗಳ ಮೂಲಕ ನೆರವು ನೀಡುವಂತಾಗಬೇಕು. ಪ್ರತಿಯೊಂದು ಗ್ರಾಮಗಳಲ್ಲಿರುವ ಸಂಘ, ಸಂಸ್ಥೆಗಳು, ಸೊಸಾಯಿಟಿಗಳನ್ನೂ ತೊಡಗಿಸಿಕೊಂಡು ಅವರಿಗೂ ಲಾಭದಲ್ಲಿ ಸ್ವಲ್ಪ ಪಾಲು ಸಿಗುವಂತೆ ಯೋಜನೆ ರೂಪಿಸಬೇಕು. ಮಿಶ್ರ ಮತ್ತು ಸಮಗ್ರ ಬೆಳೆ ಪದ್ಧತಿ ಅನುಸರಿಸಲು ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.

ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ನಾನು ನುಡಿದಂತೆ ನಡೆದಿದ್ದೇನೆ. ಇನ್ನು ಮುಂದೆ ದೇಶದ ಭವಿಷ್ಯ ರೂಪಿಸುವ ಮಕ್ಕಳ ಸೇವೆ ಮಾಡುತ್ತೇವೆ. ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಈ ಕಾರ್ಯಕ್ರಮವನ್ನು ಸಚಿವ ಎಂ.ಬಿ.ಪಾಟೀಲ ಅವರು ರೈತರಾದ ನಾನಾ ಗ್ರಾಮಗಳ ರೈತರಾದ ಭೀವಾನಾಮಾ ಮಾನವರ, ಧರ್ಮಾ ಮಾನವರ, ಅಫಾ ದೇಬಾಕರೆ, ಚಂದ್ರಶೇಖರ ಜಂಗಮಶೆಟ್ಡಿ ಜೊತೆ ಜಂಟಿಯಾಗಿ ಉದ್ಘಾಟಿಸಿದ್ದು ಗಮನಸೆಳೆಯಿತು.

ಈ ಕಾರ್ಯಾಗಾರದಲ್ಲಿ ಸುಮಾರು ಒಂದು ಸಾವಿರ ಜನ ರೈತರು ಪಾಲ್ಗೊಂಡು ಕೃಷಿ ಮತ್ತು ತೋಟಗಾರಿಕೆ ತಜ್ಞರಿಂದ ಮಾಹಿತಿ ಪಡೆದರು. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶ್ರೀಪಾದ ವಿಶ್ವೇಶ್ವರ ಮತ್ತು ಅಭಿ ಸಂಸ್ಥೆಯ ಪದಾಧಿಕಾರಿ ಶ್ರೀಪಾದ ವಿಶ್ವೇಶ್ವರ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ರೈತರಿಗೆ ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂತೋಷ ಚಪ್ಪರ ಮಾತನಾಡಿ, ಗ್ರಾಮೀಣ ಪುನಶ್ಚೇತನ ಕೇಂದ್ರದ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ವಿ.ಜಿ.ಸಂಗಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಸಿದರೆಡ್ಡಿ ಪ್ರಾರ್ಥಿಸಿದರು. ಮಾಲಾಶ್ರೀ, ಪಾರ್ವತಿ ಮತ್ತು ಚೈತ್ರಾ, ರೈತಗೀತೆ ಹಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಶ್ವನಾಥ ಹಿರೇಮಠ ನಿರೂಪಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ನವೀನ ದೇಸಾಯಿ ವಂದಿಸಿದರು.

ಗಣೇಶ ಮೂರ್ತಿ ತಯಾರಿಸುವವರಿಗೆ ನೂರೆಂಟು ವಿಘ್ನಗಳು: ಪಿಒಪಿ ಗಣೇಶನಿಗೆ ಭಾರಿ ಬೇಡಿಕೆ

ಸಾವಯವ ಕೃಷಿ, ಸೋಲಾರ್‌ ಬಗ್ಗೆ ಜಾಗೃತಿ ಮೂಡಿಸಿ

ಸಾವಯವ ಕೃಷಿ ಭಾರತೀಯರ ಪುರಾತನ ಬೇಸಾಯ ಪದ್ಧತಿಯಾಗಿದೆ. ನಮ್ಮ ಹಿರಿಯರು ಸಾವಯವ ಆಹಾರ ಬಳಸುತ್ತಿದ್ದರಿಂದ ದೈಹಿಕ ಮತ್ತು ಮಾನಸಿಕವಾಗಿ ಸೃದೃಢರಾಗಿದ್ದಾರೆ. ಆದರೆ, ಈಗ ಆಧುನೀಕರಣದ ಹೆಸರಿನಲ್ಲಿ ರಾಸಾಯನಿಕಗಳ ಗೊಬ್ಬರಗಳ ಅಧಿಕ ಬಳಕೆಯಿಂದ ಇಳುವರಿ ಹೆಚ್ಚಾದರೂ, ಅದು ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಹಲವಾರು ಜಿಲ್ಲೆಗಳಲ್ಲಿ ಭೂಮಿಯ ಫಲವತ್ತತೆಯೂ ಕಡಿಮೆಯಾಗಿದೆ. ಸಾವಯವ ಕೃಷಿ ತಕ್ಷಣಕ್ಕೆ ಲಾಭ ತರುವುದಿಲ್ಲ. ಆದರೆ, ಈ ಬೆಳೆಗಳಿಗೆ ಮತ್ತು ಸಿರಿಧಾನ್ಯಗಳಿಗೆ ಹೆಚ್ಚಿನ ಬೆಲೆ ಇದೆ. ಆದರೆ, ಒಂದು ಯೋಜನೆ ರೂಪಿಸಿ ಹಂತಹಂತವಾಗಿ ಸಾವಯವ ಕೃಷಿ ಮಾಡಬೇಕು. ಅಲ್ಲದೇ, ಸಾವಯವ ಆಹಾರ ಧಾನ್ಯಗಳಿಗೆ ಪ್ರಮಾಣ ಪತ್ರ ನೀಡುವಾಗ ಸಂಬಂಧಿಸಿದ ತೋಟಗಾರಿಕೆ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಈ ಸಂದರ್ಭದಲ್ಲಿ ರೈತರಿಗೆ ಶೋಷಣೆ ಮಾಡಬಾರದು. ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ನಾವೂ ಯೋಜನೆ ರೂಪಿಸುತ್ತೇವೆ. ವಿದ್ಯುತ್ ಸಮಸ್ಯೆ ಹೋಗಲಾಡಿಸಲು ರೈತರಲ್ಲಿ ಸೋಲಾರ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಚಿವರು ಹೇಳಿದರು. 

ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಲು ಸಲಹೆ

ಗ್ರಾಮೀಣಾಭಿವೃದ್ಧಿಯಲ್ಲಿ ನೈರ್ಮಲ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ಗುಡಿ- ಗುಂಡಾರಗಳಿಗಿಂತ ಪ್ರತಿಯೊಂದು ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಲು ಒತ್ತುನೀಡಬೇಕು. ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗಿಂತ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ ಸುಲಭವಾಗಿದೆ. ಮನೆಯ ಮಹಿಳೆಯರ ಮಾನ ಮುಖ್ಯ ಆಗಿರುವುದರಿಂದ ವೈಯಕ್ತಿಕ ಶೌಚಾಲಯಗಳ ಕುರಿತು ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.

Follow Us:
Download App:
  • android
  • ios