ಕಾರವಾರ: ಮನೆಯಂಗಳದಲ್ಲಿ ಉಚಿತ ಕ್ಯಾಂಟೀನ್ ಆರಂಭಿಸಿದ ಮಂಕಾಳ ವೈದ್ಯ
ಕುಂದು, ಕೊರತೆ ಹೇಳಿಕೊಳ್ಳಲು ತಮ್ಮನ್ನು ಹುಡುಕಿಕೊಂಡು ಕ್ಷೇತ್ರದ, ಜಿಲ್ಲೆಯ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ. ಅವರು ತಮಗಾಗಿ ಹಸಿದು ಕಾಯುತ್ತಿರಬಾರದು ಎಂಬ ಉದ್ದೇಶದಿಂದ ತಮ್ಮ ಮನೆಯಂಗಳದಲ್ಲಿ ಕ್ಯಾಂಟೀನ್ ಆರಂಭಿಸಿದ ಮಂಕಾಳ ವೈದ್ಯ
ಕಾರವಾರ(ಜೂ.13): ಇಂದಿರಾ ಕ್ಯಾಂಟೀನ್‌ಗೆ ಚೈತನ್ಯ ತುಂಬಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ನಡುವೆ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ತಮ್ಮ ಮನೆಯಂಗಳದಲ್ಲೇ ಕ್ಯಾಂಟೀನ್ ಆರಂಭಿಸಿದ್ದು, ದಿನವಿಡಿ ಉಚಿತ ತಿಂಡಿ, ಚಹದ ಸಮಾರಾಧನೆ ನಡೆಸುತ್ತಾರೆ.
ಕುಂದು, ಕೊರತೆ ಹೇಳಿಕೊಳ್ಳಲು ತಮ್ಮನ್ನು ಹುಡುಕಿಕೊಂಡು ಕ್ಷೇತ್ರದ, ಜಿಲ್ಲೆಯ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ. ಅವರು ತಮಗಾಗಿ ಹಸಿದು ಕಾಯುತ್ತಿರಬಾರದು ಎಂಬ ಉದ್ದೇಶದಿಂದ ಮಂಕಾಳ ವೈದ್ಯ ತಮ್ಮ ಮನೆಯಂಗಳದಲ್ಲಿ ಕ್ಯಾಂಟೀನ್ ಆರಂಭಿಸಿದ್ದಾರೆ. ಮಂಕಾಳ ವೈದ್ಯ ಅವರು ಊರಲ್ಲಿದ್ದಾಗ ಕ್ಯಾಂಟೀನ್‌ನಲ್ಲಿ ಬೆಳಗ್ಗೆಯಿಂದ ಸಂಜೆ 5 ಗಂಟೆ ತನಕ ಜನತೆಗೆ ತಿಂಡಿ, ಚಹ, ಕಷಾಯ ದೊರೆಯುತ್ತದೆ. ಬೆಳಗ್ಗೆ ಇಡ್ಲಿ, ಸಾಂಬಾರ್, ಚಟ್ನಿ, ಪಲಾವ್, ಉಪ್ಪಿಟ್ಟು, ಶಿರಾ ಇಂತಹ ತಿಂಡಿ ನೀಡಿದರೆ ಮಧ್ಯಾಹ್ನದ ತರುವಾಯ ಟೀ ಹಾಗೂ ಬಿಸ್ಕತ್ ನೀಡಲಾಗುತ್ತದೆ.
ನಾಮಧಾರಿ ಸಮಾಜದಿಂದ ಸ್ವಾರ್ಥರಹಿತ ರಾಜಕಾರಣ ಸಾಧ್ಯ: ಮಂಕಾಳ ವೈದ್ಯ
ಮಂಕಾಳ ವೈದ್ಯ ಊರಲ್ಲಿ ಇಲ್ಲದೆ ಇದ್ದರೂ ಮಧ್ಯಾಹ್ನದ ತನಕ ತಿಂಡಿ, ಟೀ ಸಿಗುವ ವ್ಯವಸ್ಥೆ ಕಲ್ಪಿಸಿದ್ದಾರೆ. ಸ್ವತಃ ಮಂಕಾಳ ವೈದ್ಯ ಹಾಗೂ ಅವರ ಕುಟುಂಬದವರೂ ಇಲ್ಲೇ ತಯಾರಿಸಿದ ತಿಂಡಿ ತಿನ್ನುತ್ತಾರೆ. ಮಂಕಾಳ ವೈದ್ಯ 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾಗಲೂ ಕ್ಯಾಂಟೀನ್ ಆರಂಭಿಸಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ತರುವಾಯ ಜೂ.10ರಂದು ಇದನ್ನು ಪುನಾರಂಭ ಮಾಡಿದ್ದಾರೆ.
ಒಬ್ಬರು ಅಡುಗೆ ಭಟ್ಟರನ್ನು ನೇಮಿಸಿದ್ದು, ಅವರು ನಿರಂತರವಾಗಿ ಕೆಲಸ ಮಾಡುತ್ತಾರೆ. ಮಂಕಾಳ ವೈದ್ಯರ ಭೇಟಿಗಾಗಿ ಯಾರೇ ಬಂದರೂ ಇಲ್ಲಿ ಉಚಿತವಾಗಿ ತಿಂಡಿ ತಿನ್ನಬಹುದು. ಭಾನುವಾರ 500ಕ್ಕೂ ಹೆಚ್ಚು ಜನರು ಇಲ್ಲಿ ಉಪಹಾರ ಸ್ವೀಕರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಕಾಳ ವೈದ್ಯ, ಕುಂದುಕೊರತೆಗಳ ಪರಿಹಾರಕ್ಕಾಗಿ ದೂರದಿಂದ ಬರುವವರು ಒಮ್ಮೊಮ್ಮೆ ಕಾಯುವಂತಹ ಪರಿಸ್ಥಿತಿ ಇರುತ್ತದೆ. ಯಾರೊಬ್ಬರೂ ಹಸಿದಿರಬಾರದು. ಅತಿಥಿ ಸತ್ಕಾರ ನಮ್ಮ ಸಂಸ್ಕೃತಿಯೂ ಹೌದು ಎಂದರು.