ಕುರುಬರ ಹೋರಾಟ ಯಶಸ್ವಿಯಾಗಿದ್ದಕ್ಕೆ ಸಿದ್ದುಗೆ ಕಿರಿಕಿರಿ ಆಗಿರಬಹುದು: ಈಶ್ವರಪ್ಪ
ಕುಲಶಾಸ್ತ್ರ ಅಧ್ಯಯನದ ಬಳಿಕ ಹೋರಾಟ ಮಾಡೋಣವೆಂದು ಶ್ರೀಗಳಿಗೆ ಸಿದ್ದು ಹೇಳಲಿಲ್ಲವೇಕೆ?| ಯಾವಾಗ ಇಡೀ ರಾಜ್ಯದ ಕುರುಬರು ಒಂದಾದರೋ, ಹೋರಾಟ ಯಶಸ್ವಿಯಾಗತೊಡಗಿತೋ ಆಗ ಸಿದ್ದರಾಮಯ್ಯಗೆ ಕಿರಿ ಕಿರಿ ಆಗುತ್ತಿರಬಹುದು:ಈಶ್ವರಪ್ಪ|
ಶಿವಮೊಗ್ಗ(ಫೆ.12): ಕುರುಬರ ಮೀಸಲು ಹೋರಾಟದಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಮನೆಗೆ ಹೋಗಿ ಆಹ್ವಾನಿಸಿದಾಗ ಕುಲಶಾಸ್ತ್ರ ಅಧ್ಯಯನದ ಬಳಿಕ ಹೋರಾಟ ಮಾಡೋಣ ಎಂದು ಅವರು ಹೇಳಲಿಲ್ಲವೇಕೆ ಎಂದು ಪ್ರಶ್ನಿಸಿರುವ ಸಚಿವ ಈಶ್ವರಪ್ಪ, ಈಗ ಅವರಿಲ್ಲದೆ ಕುರುಬ ಹೋರಾಟ ಯಶಸ್ವಿಯಾಗಿದ್ದಕ್ಕೆ ಅವರಿಗೆ ಕಿರಿಕಿರಿಯಾಗಿರಬಹುದು ಎಂದು ಲೇವಡಿ ಮಾಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಟಿ ಪಟ್ಟಿಗೆ ಸೇರುವ ನಿಟ್ಟಿನಲ್ಲಿ ಕುರುಬರ ಹೋರಾಟ ಏಕೆ ಬೇಕು ಎಂದು ಪ್ರಶ್ನಿಸುವ ಮೊದಲು ಸಿದ್ದರಾಮಯ್ಯ ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.
ಅಹಿಂದ ಯೋಜನೆ ರೂಪಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ
‘ಹೋರಾಟದಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಕಾಗಿನೆಲೆ ಶ್ರೀಗಳು ಮೊದಲು ಬಂದಿದ್ದು ನಿಮ್ಮ ಮನೆಗೆ ಬಂದು ಆಹ್ವಾನಿಸಿದ್ದರು. ಆಗ ‘ನಾನು ಬರೋದಿಲ್ಲ, ನೀವು ಹೋರಾಟ ಮಾಡಿ’ ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಆಗ ಏಕೆ ‘ಕುಲಶಾಸ್ತ್ರ ಅಧ್ಯಯನ ಬರಲಿ, ನಂತರ ಹೋರಾಟ ನಡೆಸೋಣ’ ಎಂದು ಸಿದ್ದರಾಮಯ್ಯ ಹೇಳಲಿಲ್ಲವೇಕೆ ಎಂದು ಪ್ರಶ್ನಿಸಿದರು. ಯಾವಾಗ ಇಡೀ ರಾಜ್ಯದ ಕುರುಬರು ಒಂದಾದರೋ, ಹೋರಾಟ ಯಶಸ್ವಿಯಾಗತೊಡಗಿತೋ ಆಗ ಸಿದ್ದರಾಮಯ್ಯಗೆ ಕಿರಿ ಕಿರಿ ಆಗುತ್ತಿರಬಹುದು. ತಾವಿಲ್ಲದೆ ಹೀಗೆ ಲಕ್ಷ ಲಕ್ಷ ಜನ ಸೇರುತ್ತಾರೆ ಎಂಬ ಕಲ್ಪನೆ ಅವರಿಗೆ ಇರಲಿಲ್ಲ ಎಂದೆನಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.