ಮಂಗಳೂರು[ನ.27]: ‘ಎ’ಗ್ರೇಡ್‌ ಮುಜರಾಯಿ ದೇವಾಲಯಗಳಲ್ಲಿ ಇಲಾಖೆಯಿಂದಲೇ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ವರನಿಗೆ ಪ್ರೋತ್ಸಾಹ ಧನವಾಗಿ 5 ಸಾವಿರ ರು., ವಧುವಿಗೆ 10 ಸಾವಿರ ರು. ಹಾಗೂ ವಧುವಿಗೆ 40 ಸಾವಿರ ರು. ಬೆಲೆ ಬಾಳುವ ಚಿನ್ನದ ತಾಳಿ, ಅಂದಾಜು 8 ಗ್ರಾಂ ತೂಕದ ಎರಡು ಚಿನ್ನದ ಗುಂಡು ನೀಡಲಾಗುತ್ತದೆ. ಇದನ್ನು ದೇವಾಲಯದ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದರು.

ದೇವಾಲಯಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು, ಆಡಳಿತಾಧಿಕಾರಿಗಳು, ಅನುವಂಶಿಕ ಮೊಕ್ತೇಸರರು, ಜಿಲ್ಲಾಧಿಕಾರಿ, ಜಿಲ್ಲಾ ಧಾರ್ಮಿಕ ಪರಿಷತ್‌ನ ಅಧ್ಯಕ್ಷರ ಅನುಮತಿ ಪಡೆದು ಸಾಮೂಹಿಕ ವಿವಾಹಕ್ಕಾಗಿ 2020ರ ಏ.26 ಹಾಗೂ ಮೇ 24ರಲ್ಲಿ ಒಂದು ದಿನಾಂಕವನ್ನು ನಿಗದಿಪಡಿಸಬೇಕು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿಗಳಿಗೆ ಬಂದು ಅರ್ಜಿ ಪಡೆದು, ದಾಖಲೆಗಳನ್ನು ನೀಡಿ ವಿವಾಹ ನಡೆಯುವ ದಿನಾಂಕಕ್ಕೆ 30 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ವಿವಾಹ ನಡೆಯುವ ಸ್ಥಳದಲ್ಲಿ ವಿವಾಹ ನೋಂದಾಣಾಧಿಕಾರಿ ಮತ್ತು ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟಅಧಿಕಾರಿಗಳು ಹಾಜರಿದ್ದು, ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸುವ ಬಗ್ಗೆ ಅಗತ್ಯ ಕ್ರಮ ವಹಿಸಬೇಕು. ಸಾಮೂಹಿಕ ವಿವಾಹಕ್ಕೆ ಸಲ್ಲಿಸುವ ದಾಖಲೆಗಳು ಸುಳ್ಳು ದಾಖಲೆಗಳೆಂದು ದೃಢಪಟ್ಟರೆ ಅಂತವಹರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ವಧು- ವರರಿಗೆ ಪ್ರೋತ್ಸಾಹ ಧನವಾಗಿ ನೀಡುವ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಈ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿಕೊಂಡು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಅವರು ಸೂಚಿಸಿದರು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ‘ಎ’ ಪ್ರವರ್ಗದ ಉತ್ತಮ ಆದಾಯ ಇರುವ ದೇವಾಲಯಗಳಲ್ಲಿ 20 ದೇವಾಲಯಗಳನ್ನು ಆಯ್ಕೆ ಮಾಡಿದ್ದು, ಡಿಸೆಂಬರ್‌ ಮೊದಲ ವಾರದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದರು.

ಶಾಸಕರಾದ ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್‌್ಕ, ಸಂಜೀವ ಮಠಂದೂರು, ಡಾ. ಭರತ್‌ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಅಪರ ಜಿಲ್ಲಾಧಿಕಾರಿ ರೂಪಾ ಇದ್ದರು.