ಬೆಳಗಾವಿ(ಆ.30): ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಭರವಸೆ ನೀಡಿದ್ದಾರೆ. 

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಈಗಾಗಲೇ ನಾನು ಗೃಹ ಸಚಿವರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಪೀರನವಾಡಿ ಪ್ರಕರಣ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಎಂದರು.

ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಬೆಳಗಾವಿಗೆ ಮಂತ್ರಿಗಳ ದಂಡು

ನಾಲ್ಕು ದಿನದ ಹಿಂದೆ ಬೆಳಗಾವಿಗೆ ಭೇಟಿ ನೀಡುವ ತೀರ್ಮಾನ ಕೈಗೊಂಡಿದ್ದೆ. ಇಷ್ಟು ಸುಲಭವಾಗಿ ಮೂರ್ತಿ ವಿವಾದ ಇತ್ಯರ್ಥ ಆಗುತ್ತದೆ ಎಂದು ಗೊತ್ತಿರಲಿಲ್ಲ. ಸಂಘರ್ಷಗಳಿಲ್ಲದೇ ಮಹಾನಾಯಕರಿಗೆ ಗೌರವ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಶಿವಾಜಿ ಮತ್ತು ರಾಯಣ್ಣನ ಹೋರಾಟ ಸ್ಮರಣೀಯ. ರಾಯಣ್ಣನ ಪ್ರತಿಮೆ ವಿವಾದ ಇತ್ಯರ್ಥಗೊಂಡಿರುವುದು ಮಾದರಿ ಬೆಳವಣಿಗೆಯಾಗಿದೆ. ಇದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಪ್ರತಿಮೆ ವಿಚಾರದಲ್ಲಿ ಆಗಿರುವ ತೀರ್ಮಾನ ರಾಷ್ಟ್ರಭಕ್ತರಿಗೆ ಸಂತೋಷ ತಂದಿದೆ. ಸಂಗೊಳ್ಳಿ ರಾಯಣ್ಣ, ಶಿವಾಜಿ ಇಬ್ಬರು, ಜಾತಿ, ಭಾಷೆಯನ್ನು ಮೀರಿದ್ದಾರೆ ಎಂದ ಅವರು, ರಾಯಣ್ಣ ಪ್ರತಿಮೆ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.