ಯತ್ನಾಳ್ ಕಠೋರ ಹಿಂದುತ್ವವಾದಿ, ಒಳ್ಳೆಯ ಜನನಾಯಕ ಆದರೆ ಇಂಥಹ ಹೇಳಿಕೆ ನೀಡ್ತಾರೆ: ಈಶ್ವರಪ್ಪ
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕಾಂಗ್ರೆಸ್ ಪ್ರೇರಿತ| ದೇಶದ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಅಪ್ಪಣೆ ಯಾಕೆ ಬೇಕು?| ಕುತಂತ್ರದ ರಾಜಕಾರಣಿಗಳು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ| ಇದು ಬಹಳ ದಿನ ನಡೆಯೋದಿಲ್ಲ:ಈಶ್ವರಪ್ಪ|
ಶಿವಮೊಗ್ಗ(ಡಿ.27): ಪಕ್ಷದ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡುತ್ತಿರುವ ಹೇಳಿಕೆಯಿಂದ ಸ್ವತಃ ಯತ್ನಾಳ್ ಹಾಗೂ ಬಿಜೆಪಿ ಪಕ್ಷ ಮುಜುಗರ ಅನುಭವಿಸುವಂತಾಗಿದ್ದು, ಅವರಿಗೆ ಬುದ್ಧಿ ಹೇಳುವ ಪ್ರಯತ್ನ ಈಗಾಗಲೇ ನಡೆಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕುರಿತಾಗಿ ಯತ್ನಾಳ್ ನೀಡುತ್ತಿರುವ ಹೇಳಿಕೆಗಳನ್ನು ರಾಜ್ಯ ನಾಯಕರು ಗಮನಿಸುತ್ತಿದ್ದಾರೆ. ನಾನು ಕೂಡಾ ಖಾರವಾಗಿಯೇ ಯತ್ನಾಳ್‌ಗೆ ಬುದ್ಧಿ ಹೇಳುವ ಪ್ರಯತ್ನ ನಡೆಸಿದ್ದೇನೆ. ತಮ್ಮಿಂದ ತಪ್ಪಾಗಿದೆ ಎಂದು ಯತ್ನಾಳ್‌ರೇ ಒಪ್ಪಿಕೊಂಡಿದ್ದಾರೆ. ಆದರೂ, ಯಾಕೋ ಮತ್ತೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ಕರೆದು ಮತ್ತೊಮ್ಮೆ ಮಾತನಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ಸಿಗರ ಕಾಲದಲ್ಲಿ ಡಿನೋಟಿಫಿಕೇಶನ್ ಇರಲಿಲ್ಲವೇ?: ಈಶ್ವರಪ್ಪ
ಯತ್ನಾಳ್ ಒಬ್ಬ ಕಠೋರ ಹಿಂದುತ್ವವಾದಿ. ಒಳ್ಳೆಯ ಜನನಾಯಕ. ಆದರೇಕೋ ಅವರು ಅಲ್ಲೊಂದು, ಇಲ್ಲೊಂದು ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿ ಹೋರಾಟ ಕಾಂಗ್ರೆಸ್ ಪ್ರೇರಿತ:
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕಾಂಗ್ರೆಸ್ ಪ್ರೇರಿತವಾಗಿದೆ. ದೇಶದ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಅಪ್ಪಣೆ ಯಾಕೆ ಬೇಕು? ಕುತಂತ್ರದ ರಾಜಕಾರಣಿಗಳು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯೋದಿಲ್ಲ ಎಂದರು.