ಹುಬ್ಬಳ್ಳಿ(ಡಿ.08): ಮಾಜಿ ಸಿಎಂ ಸಿದ್ದರಾಮಯ್ಯ ನಾಯಕತ್ವಕ್ಕೆ ಅಂತ್ಯಕಾಲಕ್ಕೆ ಬಂದಿದೆ. ಉಪಚುನಾವಣಾ ಫಲಿತಾಂಶ ನಂತರ ಬಿಜೆಪಿ ಸರ್ಕಾರವೇ ಮುಂದುವರೆಯಲಿದೆ. ಸಿದ್ದರಾಮಯ್ಯನವರು ಮೊದಲು ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ಬೈ ಎಲೆಕ್ಷನ್ ಫಲಿತಾಂಶದ ಬಳಿಕ ಸಿದ್ದರಾಮಯ್ಯನವರ ವಿರೋಧ ಪಕ್ಷದ ಸ್ಥಾನ ಮುಟ್ಟುಗೋಲು ಹಾಕಿಕೊಳ್ಳುವ ಸ್ಥಿತಿ ಬರಲಿದೆ. ಅದನ್ನ ಬಿಟ್ಟು ಬಿಜೆಪಿ ಬಗ್ಗೆ ಸುಖಾಸುಮ್ಮನೇ ಮಾತನಾಡಬೇಡಿ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕೂಸು ಹುಟ್ಟುವ ಮುಂಚೆಯೇ ಕುಲಾಯಿ ಹೊಲಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಬರುವ ಮುಂಚೆಯೇ ಅವರು ಅಧಿಕಾರದ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಫಲಿತಾಂಶ ಬರುವುದಕ್ಕು ಮೊದಲೇ ಯಾರು ಸಿಎಂ ಆಗಬೇಕು ಎನ್ನುವ ಚರ್ಚೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿಂದೆ ಸಿದ್ದರಾಮಯ್ಯ ಅವರು ನೀಡಿದಂತಹ ಭಾಗ್ಯ ಯೋಜನೆಗಳು ಜನಸಾಮಾನ್ಯರಿಗೆ ಯಾವುದೂ ತಲುಪಿಲ್ಲ. ಸಿದ್ದರಾಮಯ್ಯ ಅವರಿಗೆ ಜನರ ನಾಡಿಮಿಡಿತವೇ ಗೊತ್ತಿಲ್ಲ. ಅಹಂಕಾರ, ಹಮ್ಮು ಬಿಮ್ಮಿನಿಂದ ಮಾತನಾಡುತ್ತಾರೆ. ಕೆಟ್ಟದಾಗಿ ಮಾತನಾಡುವುದರಿಂದ ಕಾಂಗ್ರೆಸ್‌ಗೆ ಮತ ಬರಲ್ಲ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯದಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.