ಬೆಂಗಳೂರು(ಮಾ.17): ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯಲ್ಲಿ ದುಂದುವೆಚ್ಚದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ, ಹಣ ಹೇಗೆ ಖರ್ಚು ಮಾಡಬೇಕೆಂಬುದನ್ನು ನಿರ್ಧರಿಸಲು ಸಮಿತಿಯಿರುತ್ತದೆ. ಈ ಸಮಿತಿಯ ಸೂಚನೆ ಆಧರಿಸಿ ವೆಚ್ಚ ಮಾಡಲಾಗುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಮೇಲ್ಮನೆಯಲ್ಲಿ ಕಾಂಗ್ರೆಸ್‌ನ ಮೋಹನ್‌ ಕುಮಾರ್‌ ಕೊಂಡಜ್ಜಿ ಅವರು ಚಲನಚಿತ್ರೋತ್ಸವದ ಹೆಸರಿನಲ್ಲಿ ದುಂದುವೆಚ್ಚ ನಡೆಸಲಾಗುತ್ತಿದೆ ಎಂಬ ಬಗ್ಗೆ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ವೈಮಾನಿಕ ಪ್ರದರ್ಶನದಂತಹ ಜಾಗತಿಕ ಮಟ್ಟದಲ್ಲಿ ಭಾರತದ ಛಾಪು ಹೆಚ್ಚಿಸುವ, ಶಕ್ತಿ ಪ್ರದರ್ಶಿಸುವ ಕಾರ್ಯಕ್ರಮಗಳನ್ನು ದುಂದುವೆಚ್ಚ ಎಂದು ಭಾವಿಸಬಾರದು. ಯಾವುದೇ ವಿಚಾರದಲ್ಲಿ ದುಂದುವೆಚ್ಚ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದರು.

ಮಾ.24ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಈಗಾಗಲೇ ಸರ್ಕಾರ .2 ಕೋಟಿ ಬಿಡುಗಡೆ ಮಾಡಿದೆ. ಜತೆಗೆ ಕಳೆದ ಸಾಲಿನ .47.90 ಲಕ್ಷ ಬಾಕಿ ಉಳಿದಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯು .8.50 ಕೋಟಿ ಹೆಚ್ಚುವರಿ ಅನುದಾನ ಕೋರಿದೆ. ಕಾರ್ಯಕ್ರಮದ ಪಟ್ಟಿಯು ಪರಿಶೀಲನಾ ಹಂತದಲ್ಲಿದ್ದು, ಕೊರೋನಾ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಮುಂದೂಡಿದ್ದೇವೆ ಎಂದರು.

ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ದೇಶ, ವಿದೇಶಗಳ ಗಣ್ಯರು ಭಾಗಿಯಾಗುತ್ತಾರೆ. ಇದಕ್ಕೆ ಎಷ್ಟು ಮತ್ತು ಹೇಗೆ ವೆಚ್ಚ ಮಾಡಬೇಕು ಎಂಬುದನ್ನು ಸರ್ಕಾರ ರಚಿಸಿದ ಸಮಿತಿಯಲ್ಲಿ ನಿರ್ಧಾರವಾಗುತ್ತದೆ. ಅಗತ್ಯವಿರುವುದಕ್ಕೆ ಸರ್ಕಾರ ವೆಚ್ಚ ಮಾಡಬೇಕಾಗುತ್ತದೆ. ಅದನ್ನೇ ಮಾಡಲಾಗುತ್ತಿದೆ ಎಂದರು.