ಹುಬ್ಬಳ್ಳಿ(ಮಾ.06): ತಮ್ಮ ವಿರುದ್ಧ ಸುದ್ದಿ ಪ್ರಸಾರ ತಡೆಕೋರಿ ಆರು ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ.  ಅಪಪ್ರಚಾರ ಆಗಬಾರದು ಅಂತ ಕೋರ್ಟ್ ಮೊರೆ ಹೋಗಿದ್ದಾರೆ. ಅದು ಅವರ ವೈಯುಕ್ತಿಕ ವಿಚಾರವಾಗಿದೆ. ಈಗಿನ ಕಾಲದಲ್ಲಿ ಅಪ್ರಚಾರ ಆದ ನಂತರ ಏನೂ ಮಾಡೋಕ್ಕಾಗಲ್ಲ. ಅದಕ್ಕೆ ಅವರು ಮೊದಲೇ ನ್ಯಾಯಲಯದ ಮೊರೆ ಹೋಗಿದ್ದಾರೆ. ಸಿಡಿ ಬಂದ ಬಳಿಕ ಏನೂ ಮಾಡೋಕ್ಕಾಗಲ್ಲ, ಹೀಗಾಗಿ ಅವರು ಕೋರ್ಟ್ ಹೋಗಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ತಮ್ಮ ವಿರುದ್ದ ಸುದ್ದಿ ಪ್ರಸಾರ ತಡೆಕೋರಿ ಆರು ಸಚಿವರು ಕೋರ್ಟ್ ಮೊರೆ ಹೋದ ವಿಚಾರದ ಬಗ್ಗೆ ಇಂದು(ಶನಿವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ನ್ಯಾಯಲಯದ ಮೊರೆ ಹೋಗುವ ಅವಕಾಶವಿದೆ‌. ಸುದ್ದಿ ಬಿತ್ತರವಾದ ಮೇಲೆ ಕರೆಕ್ಷನ್ ಮಾಡೋದಕ್ಕೆ ಆಗಲ್ಲ. ಈ ರೀತಿಯ ಪ್ರಕರಣಗಳಿಗೆ ನಾವೇ ಸುಧಾರಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. 

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ ಸಂಗಮೇಶ್, ಸ್ಪೀಕರ್ ಗರಂ

ಸದನದಲ್ಲಿ ಕಾಂಗ್ರೆಸ್‌ ಶಾಸಕ ಸಂಗಮೇಶ ಶರ್ಟ್ ಬಿಚ್ಚಿದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಗಮೇಶ ಅವರನ್ನ ಒಂದು ವಾರ ಅಲ್ಲ ಇಡೀ ಅಧಿವೇಶನ ಪೂರ್ತಿ ಅಮಾನತು ಮಾಡಬೇಕು. ಸಂಗಮೇಶ್ ಅವರನ್ನು ಸಮರ್ಥನೆ ಮಾಡುವ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು. ಸಂಗಮೇಶ ಸ್ಪೀಕರ್‌ಗೆ ಧಮ್ಕಿ ಹಾಕೋದು ಬಿಡಬೇಕು. ಅದು ಭದ್ರಾವತಿಯಲ್ಲಿ ಮಾತ್ರ ನಡೆಯುತ್ತೆ, ಅಸೆಂಬ್ಲಿಯಲ್ಲಿ ನಡೆಯಲ್ಲ. ಸ್ಪೀಕರ್‌ಗೆ ಕ್ಷಮೆ ಕೇಳಬೇಕಿತ್ತು. ಸ್ಪೀಕರ್‌ಗೆ ಅಗೌರವ ತೋರಿದ್ರೆ ಹಕ್ಕು ಚ್ಯುತಿ ಆಗುತ್ತೆ. ಬರೀ ಶರ್ಟ್ ಬಿಚ್ಚಿದ್ದಾರೆ ಅಂತ, ಸಿದ್ದರಾಮಯ್ಯ ಅಶಿಸ್ತನ್ನ ಸಮರ್ಥನೆ ಮಾಡಿಕೊಳ್ತಾರೆ. ಮುಂದೆ ಅಂಗಿ ಚೊಣ್ಣ ನೂ ಬಿಚ್ಚಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.