ತುಂಗಭದ್ರಾ ಮಂಡಳಿಯಿಂದ ಡ್ಯಾಂಗೆ ಮುಕ್ತಿ ಸಿಕ್ಕಿತೇ..?
* ರಾಷ್ಟ್ರೀಯ ಯೋಜನೆಯ ವ್ಯಾಪ್ತಿಗೆ ತುಂಗಭದ್ರಾ ಜಲಾಶಯ
* ಮೋದಿ ಘೋಷಿಸಿದ ಸಾವಿರ ಕೋಟಿ ರುಪಾಯಿ ಬರುವುದೇ?
* ತುಂಬಿರುವ ಹೂಳು ಸಮಸ್ಯೆಗೆ ಸಿಗುವುದೇ ಪರಿಹಾರ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಸೆ.17): ರಾಜ್ಯದ ಪಾಲಿಗೆ ಬಿಳಿಯಾನೆಯಂತಿರುವ ತುಂಗಭದ್ರಾ ಮಂಡಳಿ ರದ್ದಾಗುವ ಆಶಾಭಾವನೆ ಒಡಮೂಡಿದೆ. ಬಹು ವರ್ಷಗಳಿಂದಲೂ ಈ ಭಾಗದ ಬೇಡಿಕೆ ಈಗ ಈಡೇರುವ ಕಾಲ ಸನ್ನಿಹಿತವಾಗಿದೆ. ತುಂಗಭದ್ರಾ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಇದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸದನದಲ್ಲಿಯೇ ಹೇಳಿರುವುದರಿಂದ ಬಹುದಿನಗಳ ಆಸೆ ಚಿಗುರೊಡೆದಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯ ರಾಜ್ಯದಲ್ಲಿಯೇ ಇದ್ದರೂ ನಿರ್ವಹಣೆ ಮಾತ್ರ ತುಂಗಭದ್ರಾ ಬೋರ್ಡ್‌ನಿಂದ. ಜಲಾಶಯ ನಮ್ಮದಾಗಿದ್ದರೂ ಅದರ ನೀರು ನಿರ್ವಹಣೆ ಮಾತ್ರ ಆಂಧ್ರದ ಅಧಿಕಾರಿಗಳೇ ತುಂಬಿರುವ ತುಂಗಭದ್ರಾ ಮಂಡಳಿಯಿಂದ. ಹೀಗಾಗಿ, ರಾಜ್ಯದಲ್ಲಿಯೇ ತುಂಗಭದ್ರಾ ಜಲಾಶಯ ಇದ್ದರೂ ಸಾಲು ಸಾಲು ಅನ್ಯಾಯಗಳು ಆಗುತ್ತಲೇ ಇದ್ದವು. ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ನೀರಿಗಾಗಿ ಪರಿತಪಿಸುವುದು ಇದ್ದೇ ಇತ್ತು.
ರಾಷ್ಟ್ರೀಯ ಯೋಜನೆಯಾಗುತ್ತಿದ್ದಂತೆ ತುಂಗಭದ್ರಾ ಮಂಡಳಿ ತಕ್ಷಣ ರದ್ದಾಗುತ್ತದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಪಿ. ಪ್ರಕಾಶ ಅವರು ತುಂಗಭದ್ರಾ ಮಂಡಳಿ ರಾಜ್ಯದ ಪಾಲಿಗೆ ಬಿಳಿಯಾನೆಯಂತಿದ್ದು, ಇದನ್ನು ರದ್ದು ಮಾಡುವಂತೆ ಕೇಂದ್ರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿದೆ ಎಂದು ಹೇಳಿದ್ದರು. ಇದಕ್ಕಾಗಿ ಅವರು ಪ್ರಯತ್ನಿಸಿದ್ದರೂ ಅದು ಕೈಗೂಡಿರಲಿಲ್ಲ. ಇದಾದ ಮೇಲೆ ಬಂದ ಸಚಿವರೆಲ್ಲರೂ ತುಂಗಭದ್ರಾ ಮಂಡಳಿ ರದ್ದಿಗೆ ಆಗ್ರಹಿಸಿದ್ದೇ ಆಗ್ರಹಿಸಿದ್ದು. ಈಗ ಕಾಲ ಕೂಡಿಬಂದಂತೆ ಇದೆ.
ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯದ ನೀರು..!
ತುಂಗಭದ್ರಾ ಮಂಡಳಿ ತುಂಗಭದ್ರಾ ಜಲಾಶಯ ನೀರು ನಿರ್ವಹಣೆಯಲ್ಲಿ ಅನೇಕ ಯಡವಟ್ಟುಗಳನ್ನು ಮಾಡುತ್ತಲೇ ಇದೆ. ರಾಜ್ಯಕ್ಕೆ ಅನ್ಯಾಯವೆಸಗುತ್ತಲೇ ಬಂದಿದೆ. ಸುಮಾರು 18 ಟಿಎಂಸಿ ನೀರು ಆವಿಯಾಗುತ್ತದೆ ಎಂದು ಲೆಕ್ಕಚಾರ ಮಾಡುತ್ತದೆ. ಇನ್ನು ಸೋರಿಕೆಯ ಲೆಕ್ಕಚಾರದಲ್ಲಿ 5 ಟಿಎಂಸಿ ನೀರು ಕಡಿತ ಮಾಡಲಾಗುತ್ತದೆ. ಈ ಕುರಿತು ತುಂಗಭದ್ರಾ ಕಾಡಾ ಇಇ ಆಗಿದ್ದ ರಾಜಶೇಖರ ಅವರು ಮಂಡಳಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು.
ರಾಜ್ಯದಲ್ಲಿ ಏತ ನೀರಾವರಿಯಿಂದ ಬಳಕೆ ಮಾಡಿಕೊಳ್ಳುವುದನ್ನು ಲೆಕ್ಕಹಾಕುವ ತುಂಗಭದ್ರಾ ಮಂಡಳಿ ಪ್ರತಿ ವರ್ಷ ನದಿಯ ಮೂಲಕ ಹರಿದು ಹೋಗುವ ನೂರಾರು ಟಿಎಂಸಿ ನೀರಿನ ಲೆಕ್ಕ ಮಾತ್ರ ಹಾಕುವುದಿಲ್ಲ. ಅಷ್ಟೇ ಅಲ್ಲ, ನದಿಯಿಂದ ಹೀಗೆ ಹರಿದು ಹೋಗುವ ನೀರನ್ನು ಸಮಾಂತರ ಜಲಾಶಯದ ಮೂಲಕ ಆಂಧ್ರ ಮತ್ತು ತೆಲಂಗಾಣ ಬಳಕೆ ಮಾಡಿಕೊಳ್ಳುತ್ತವೆ. ಈಗ ಈ ಎಲ್ಲಾ ಲೆಕ್ಕ ಪಕ್ಕಾ ಆಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವುದರಿಂದ ಕೇಂದ್ರ ನೀರಾವರಿ ಆಯೋಗವೇ ಎಲ್ಲ ಲೆಕ್ಕಚಾರವನ್ನು ನೋಡಿಕೊಳ್ಳುತ್ತದೆ. ಆಗ ಹಂಚಿಕೆಯಲ್ಲಿ ಅನ್ಯಾಯವಾಗುವುದಿಲ್ಲ ಎನ್ನಲಾಗುತ್ತಿದೆ.
ಸಿಗುವುದೇ ಪರಿಹಾರ
ತುಂಗಭದ್ರಾ ಜಲಾಶಯದಲ್ಲಿ ಸುಮಾರು 32 ಟಿಎಂಸಿಯಷ್ಟುಹೂಳು ತುಂಬಿದೆ. ಇದನ್ನು ತೆಗೆಯುವ ಪ್ರಯತ್ನ ನಡೆದು ಕೈಗೂಡಲೇ ಇಲ್ಲ. ಜಾಗತಿಕ ಟೆಂಡರ್ ಸಹ ಕರೆದರೂ ಯಾರೂ ಮುಂದೆ ಬರಲಿಲ್ಲ. ಈಗ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಿದ್ದರಿಂದ ಇದಕ್ಕೆ ಪರಿಹಾರ ಸಿಗುವುದೇ ಎನ್ನುವ ಆಶಾಭಾವನೆ ಮೂಡಿದೆ. ಇಲ್ಲದಿದ್ದರೆ ಪರ್ಯಾಯ ಯೋಜನೆಗಳ ಜಾರಿಯಾದರೂ ತೀವ್ರವಾಗಿ ಆಗುತ್ತದೆ.
ಕಾವೇರಿಗೆ ಕೊಟ್ಟಷ್ಟು ಆದ್ಯತೆ ತುಂಗಾ, ಕೃಷ್ಣಾಕ್ಕಿಲ್ಲ: ರಾಜೂಗೌಡ
ಕೊಡುವರೇ ಪ್ರಧಾನಿಗಳು
ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾವತಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ, ತುಂಗಭದ್ರಾ ಯೋಜನೆಗೆ ಸಾವಿರ ಕೋಟಿ ರುಪಾಯಿ ನೀಡುವ ಭರವಸೆ ನೀಡಿದ್ದರು.
ಅವರಿಗಿಂತಲೂ ಮುಂಚೆ ಮಾತನಾಡಿದ್ದ ಯಡಿಯರಪ್ಪ ಅವರು ಸಾವಿರ ಕೋಟಿ ರುಪಾಯಿಯನ್ನು ಕೇಳಿದ್ದರು. ಈಗ ಎಲ್ಲ ವಿಷಯಗಳಿಗೂ ರೆಕ್ಕೆಪುಕ್ಕ ಬರುತ್ತದೆ.
ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದರೆ ಖಂಡಿತವಾಗಿಯೂ ನಮಗೆ ಲಾಭವಾಗುತ್ತದೆ. ತುಂಗಭದ್ರಾ ಮಂಡಳಿ ರದ್ದಾಗುತ್ತದೆ. ಇದರಿಂದ ಆಗುತ್ತಿದ್ದ ಅನ್ಯಾಯ ತಪ್ಪುತ್ತದೆ. ಹೂಳು ತೆಗೆಯುವುದಕ್ಕೆ ಗಣಿಬಾಧಿತ ಪ್ರದೇಶದ ಅನುದಾನ ಲಭ್ಯವಾಗುತ್ತದೆ. ನದಿ ಜೋಡಣೆಯ ಮೂಲಕ ನೀರಿನ ಕೊರತೆಗೂ ಪರಿಹಾರ ದೊರೆಯುತ್ತದೆ ಎಂದು ಮುನಿರಾಬಾದ್‌ನ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ತಿಳಿಸಿದ್ದಾರೆ.
ತುಂಗಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಕ್ಕೆ ಕೇಂದ್ರ ಒಪ್ಪಿದ್ದು, ಅದು ಜಾರಿಯಾಗುವ ವಿಶ್ವಾಸವಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.