Chitradurga Irrigation Project; ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ನೀರಾವರಿ ಕಾಮಗಾರಿಗಳನ್ನು ತ್ವರಿತವಾಗಿ ನಿರ್ವಹಿಸಲು ಅನುಕೂಲವಾಗುವಂತೆ ತುರ್ತಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಜು.13): ನೀರಾವರಿ ಕಾಮಗಾರಿಗಳನ್ನು ತ್ವರಿತವಾಗಿ ನಿರ್ವಹಿಸಲು ಅನುಕೂಲವಾಗುವಂತೆ ತುರ್ತಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಭೂಮಾಲೀಕರಿಗೆ ಪರಿಹಾರ ಧನವನ್ನು ವಿತರಿಸಿ. ಒಂದು ವೇಳೆ ಭೂ ಮಾಲೀಕರು ಕೌಟುಂಬಿಕ ಹಾಗೂ ಇನ್ನಿತರ ಕಾರಣಗಳಿಂದ ಪರಿಹಾರ ಧನ ಪಡೆಯದೇ ಇದ್ದಲ್ಲಿ , ಪರಿಹಾರ ಮೊತ್ತವನ್ನು ನಿಯಾಮನುಸಾರ ನ್ಯಾಯಲಯಕ್ಕೆ ಠೇವಣಿ ಮಾಡಿ ಜಮೀನನ್ನು ನಿಗಮದ ವಶಕ್ಕೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಯ ಕಛೇರಿಯ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಭೂ ಸ್ವಾಧಿನ ಪ್ರಕ್ರಿಯೆ ವಿಳಂಬವಾದಲ್ಲಿ ಸಂಬಂಧಪಟ್ಟ ಭೂಸ್ವಾಧೀನಾಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಪರಿಹಾರ ಧನವನ್ನು ಪಡೆದ ಭೂ ಮಾಲೀಕರು ಕಾಮಗಾರಿಗೆ ಅಡ್ಡಿಪಡಿಸುವುದು ಕಾನೂನು ಬಾಹಿರ. ಪೊಲೀಸ್ ಭದ್ರತೆ ಪಡೆದು ಕಾಮಗಾರಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು .
ಭದ್ರಾ ಮೇಲ್ದಂಡೆ ಯೋಜನೆಯ ವಿವಿಧ ಪ್ಯಾಕೇಜ್‌ವಾರು ಪ್ರಗತಿ ಪರಿಶೀಲಿಸಿದ ಸಚಿವರು ಕುಂಠಿತ ಯೋಜನೆಗಳ
ಗುತ್ತಿಗೆದಾರರಿಗೆ ನೋಟೀಸ್ ನೀಡಿ, ಪ್ರಗತಿಯನ್ನು ಚುರುಕುಗೊಳಿಸಲು ಸೂಚಿಸಿದರು . ಕಾಮಗಾರಿಗಳನ್ನು ನಿರ್ವಹಿಸುವ ಸಮಯದಲ್ಲಿ ಎದುರಾಗುವ ಭೂಸ್ವಾಧೀನ , ಅರಣ್ಯ ಭೂಮಿ , ವಿದ್ಯುತ್‌ಚ್ಛಕ್ತಿ ಲೈನ್ , ರೈಲ್ವೆ ಮತ್ತು ಹೆದ್ದಾರಿ ಕ್ರಾಸಿಂಗ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕ್ರೋಡಿಕರಿಸಿ ನನ್ನ ಗಮನಕ್ಕೆ ತಂದರೆ ಸಂಬಂಧಿಸಿದ ಇಲಾಖೆಯವರ ಜೊತೆ ಸಭೆ ಜರುಗಿಸಿ ಪರಿಹಾರ ಒದಗಿಸುವುದಾಗಿ ಹೇಳಿದರು.
2022-23 ನೇ ಸಾಲಿನ ಅಯವ್ಯಯ ಭಾಷಣದಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ಕಿ.ಮೀ.0.00 ಇಂದ 60.00 ಕಿ.ಮೀ. ವರೆಗೆ ಪೂರ್ಣಗೊಳಿಸಿ , ಹೊಳಲ್ಕೆರೆ ಫೀಡರ್ ಕೆನಾಲ್ ಮೂಲಕ ಹೊಳಲ್ಕೆರೆ ತಾಲ್ಲೂಕಿನ 28 ಕೆರೆಗಳಿಗೆ ನೀರು ತುಂಬಿಸಲು, ತರೀಕೆರೆ ಏತ ನೀರಾವರಿ ಯೋಜನೆಯ ಮುಖಾಂತರ ತರೀಕೆರೆ ತಾಲ್ಲೂಕಿನ 20,150 ಹೆಕ್ಟೇರ್ ಜಮೀನುಗಳಿಗೆ ಹನಿ ನೀರಾವರಿ ಮೂಲಕ ನೀರಾವರಿ ಕ್ಷೇತ್ರ ಸೃಷ್ಟಿಸುವ ಘೋಷಣೆ ಮಾಡಲಾಗಿದೆ.
ಆಯವ್ಯಯದ ಘೋಷಣೆಯಂತೆ ನಿಗದಿಪಡಿಸಿದ ಗುರಿ ಸಾಧಿಸಲು ಪ್ರಯತ್ನಿಸುವಂತೆ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಬ್ಬಿನಹೊಳಲು , ಕಾಟಿಗನರ , ಚಿನ್ನಾಪುರ ಮತ್ತು ಸೊಲ್ಲಾಪುರ ಗ್ರಾಮಗಳ ಭೂಮಾಲೀಕರು ಭೂಸ್ವಾಧೀನ ಕಾಯ್ದೆಯ ಪ್ರಕಾರ ಪರಿಹಾರ ಧನ ನೀಡಲಾಗಿದೆ. ಹೆಚ್ಚಿನ ಪರಿಹಾರಕ್ಕಾಗಿ ಕಾಮಗಾರಿಯನ್ನು ನಿರ್ವಹಿಸಲು ಅನುಮತಿ ನೀಡದೇ ಭೂ ಮಾಲೀಕರರು ಅಡ್ಡಿಯನ್ನುಂಟು ಮಾಡುತ್ತಿರುವ ಕುರಿತು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಯೋಜನೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂ .800 ಕೋಟಿ ಮೊತ್ತದ ಬಿಲ್ಲುಗಳು ಪಾವತಿ ಬಾಕಿ ಇದೆ. ಕಾಮಗಾರಿಗಳು ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಲು ಹಣ ಬಿಡುಗಡೆಗೊಳಿಸವಂತೆ ಯೋಜನೆಯ ಮುಖ್ಯ ಇಂಜಿನೀಯರ್ ಎಂ.ರವಿ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿದರು.