ಬೆಳೆ ವಿಮೆ ತೊಡಕುಗಳ ನಿವಾರಣೆಗೆ ಸಚಿವ ಎಂ.ಸಿ.ಸುಧಾಕರ್ ಸೂಚನೆ
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಹಾಗೂ ಸರ್ಕಾರದಿಂದ ಬರುವ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಜನರಿಗೆ ಸಮಸ್ಯೆ ಆಗದ ರೀತಿ ಆಡಳಿತ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ (ಆ.09): ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಹಾಗೂ ಸರ್ಕಾರದಿಂದ ಬರುವ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಜನರಿಗೆ ಸಮಸ್ಯೆ ಆಗದ ರೀತಿ ಆಡಳಿತ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜೂನ್-2023ರ ಮಾಹೆ ವರೆಗಿನ ಪರಿಶೀಲನೆಯನ್ನು ಇಲಾಖಾವಾರು ನಡೆಸಿ ಮಾತನಾಡಿದರು.
ವಿಮಾ ಪರಿಹಾರ ತೊಡಕು ಪರಿಹರಿಸಿ: ಇತ್ತೀಚಿನ ಮಾಹೆಗಳಲ್ಲಿ ಹಾನಿಗೊಳಗಾದ ರೈತರಿಗೆ ವಿಮಾ ಪರಿಹಾರ ಸಂದಾಯ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ವಿಮೆ ಪರಿಹಾರ ನೀಡುವಲ್ಲಿ ಇರುವ ತೊಡಕುಗಳನ್ನು ನಿವಾರಿಸಲು ಸೂಕ್ತ ಕ್ರಮವಹಿಸಬೇಕು. ವಿಮಾ ಕಂಪನಿಗಳು ಜಿಲ್ಲೆಯಲ್ಲಿ ಕಚೇರಿ ತೆರೆದು ಅಧಿಕಾರಿಗಳು ಮತ್ತು ರೈತರ ನಿರಂತರ ಸಂಪರ್ಕದಲ್ಲಿದ್ದು, ಸಂತ್ರಸ್ತ ರೈತರಿಗೆ ತುರ್ತು ಪರಿಹಾರ ಒದಗಿಸಬೇಕು. ಬೆಳೆ ನಷ್ಟ ಆದಾಗ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಲೆಕ್ಕಹಾಕುವಲ್ಲಿ ಇರುವ ತಾಂತ್ರಿಕ ತೊಡಕುಗಳನ್ನು ಪ್ರಮುಖವಾಗಿ ನಿವಾರಿಸಬೇಕು ಎಂದು ಸೂಚನೆ ನೀಡಿದರು.
ಎಸ್ಸಿ-ಎಸ್ಟಿ ಕಾಯ್ದೆಯಡಿ ಸುಳ್ಳು ಕೇಸು: ಹೈಕೋರ್ಟ್ ಕಿಡಿ
ಟೊಮೆಟೋ ರೋಗಕ್ಕೆ ಬಂದಿರುವ ಬಿಳಿ ನೊಣ ರೋಗ ನಿವಾರಣೆಗೆ ಕ್ರಮ ಕೈಗೊಳ್ಳಲು ಈಗಾಗಲೇ ತಿಳಿಸಲಾಗಿತ್ತು. ಈ ಕುರಿತು ರೈತರಲ್ಲಿ ಅರಿವು ಮೂಡಿಸುವ ಜೊತೆಗೆ ನರ್ಸರಿ ಫಾರಂಗಳಲ್ಲಿ ಸಸಿ ವಿತರಕರಿಗೆ, ಬೀಜ ಪೂರೈಕೆದಾರರಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು. ಈ ಕುರಿತು ಕೇಂದ್ರ ಅಧ್ಯಯನ ತಂಡಕ್ಕೂ ಮಾಹಿತಿ ನೀಡಲಾಗಿದೆ. ಅವರಿಂದ ಪರಿಹಾರ ಕ್ರಮಗಳನ್ನು ನೀರಿಕ್ಷಿಸಿ, ಸ್ಥಳೀಯವಾಗಿ ಏನೆಲ್ಲ ಕ್ರಮ ಕೈಗೊಳ್ಳಬೇಕೋ ಆ ಎಲ್ಲಾ ಕ್ರಮ ಜರುಗಿಸುವ ಮೂಲಕ ರೈತರಿಗೆ ನೆರವಾಗಬೇಕೆಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕೊಳವೆಬಾವಿ ಕೊರೆಸಲು ಸೂಚನೆ: ಕುಡಿಯುವ ನೀರಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ-7, ಬಾಗೇಪಲ್ಲಿ-3, ಚಿಂತಾಮಣಿ-4, ಗೌರಿಬಿದನೂರು-3 ಹಾಗೂ ಶಿಡ್ಲಘಟ್ಟತಾಲ್ಲೂಕಿನಲ್ಲಿ-4 ಗ್ರಾಮಗಳಲ್ಲಿ ತೊಂದರೆಯುಂಟಾಗಿದ್ದು, ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಚಿಂತಾಮಣಿ ತಾಲ್ಲೂಕಿನಲ್ಲಿ-26, ಚಿಕ್ಕಬಳ್ಳಾಪುರ-7, ಶಿಡ್ಲಘಟ್ಟ-10, ಗೌರಿಬಿದನೂರು-6 ಹಾಗೂ ಬಾಗೇಪಲ್ಲಿ ತಾಲ್ಲೂಕಿನಲ್ಲಿ 9 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಲಿದೆ. ಈ ಬವಣೆಯನ್ನು ಪರಿಹರಿಸಲು ಹಾಗೂ ಮುಂಜಾಗ್ರತೆಯಾಗಿ ಕೊಳವೆ ಬಾವಿ ಕೊರೆಯಲು ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಯಿಲೆ ಬಂದಾಗ ಮನೆ ಮನೆಗೆ ತೆರಳಿ ಆರೋಗ್ಯ ಸೇವೆ ಒದಗಿಸಲು 9 ಪಶು ಸಂಜೀವಿನಿ ಆಂಬುಲೆನ್ಸ್ ಗಳು ಸಿದ್ದವಿವೆ. ಆದರೆ ಅದಕ್ಕೆ ಬೇಕಾದ ಸಿಬ್ಬಂದಿ ಮತ್ತು ವೈದ್ಯರ ಕೊರತೆಯಿಂದ ಸೇವೆಗೆ ಲಭ್ಯವಿಲ್ಲದಂತಾಗಿದ್ದು, ಈ ತಿಂಗಳ ಅಂತ್ಯದೊಳಗೆ ಈ ಸಮಸ್ಯೆ ಪರಿಹರಿಸಲಾಗುವುದು. ಜಲ ಜೀವನ್ ಮಿಷನ್ ಯೋಜನೆಯಡಿ ಟೆಂಡರ್ ನಲ್ಲಿನ ಗುತ್ತಿಗೆದಾರರ ಭಾಗವಹಿಸುವಿಕೆ ತೊಡಕುಗಳನ್ನು ಪರಿಹರಿಸಲು ಗುತ್ತಿಗೆದಾರರೊಂದಿಗೆ ಸಭೆ ಕರೆಯಲು ಸಚಿವರು ಸೂಚಿಸಿದರು. ಒಟ್ಟಾರೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ವ್ಯವಸ್ಥಿತ ಷಡ್ಯಂತ್ರ: ಸಚಿವ ಕೃಷ್ಣ ಬೈರೇಗೌಡ
ರೇಷ್ಮೆ ಮಾರುಕಟ್ಟೆನಿರ್ಮಾಣಕ್ಕೆ ಕ್ರಮ: ಶಿಡ್ಲಘಟ್ಟನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆನಿರ್ಮಿಸಲು ಸರ್ಕಾರ ಆಯವ್ಯಯದಲ್ಲಿ 75 ಕೋಟಿ ಮೀಸಲಿಟ್ಟಿದೆ. ಅದರಂತೆ ನಿರ್ಮಾಣ ಕಾರ್ಯಕ್ಕೆ ತುರ್ತು ಕ್ರಮ ಜರುಗಿಸಲು 15 ಎಕರೆ ಜಮೀನನ್ನು ಶಿಡ್ಲಘಟ್ಟನಗರಕ್ಕೆ ಹತ್ತಿರದಲ್ಲಿ ಗುರುತಿಸಿ ಒಂದು ತಿಂಗಳ ಒಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ಕೆ.ಹೆಚ್.ಪುಟ್ಟಸ್ವಾಮಿ ಗೌಡ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್.ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ಉಪ-ಅರಣ್ಯ ಸಂರಕ್ಷಣಾಧಕಾರಿ ರಮೇಶ್, ಉಪ-ವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಮತ್ತಿತರ ಧಿಕಾರಿಗಳು ಉಪಸ್ಥಿತರಿದ್ದರು.