ಕಾನೂನು ಚೌಕಟ್ಟಲ್ಲೇ ಒಕ್ಕಲಿಗರ ಮೀಸಲಾತಿ ನಿರ್ಧಾರ: ಅಶ್ವತ್ಥ ನಾರಾಯಣ
ರಾಜ್ಯ ಒಕ್ಕಲಿಗ ಸಂಘ ಹಾಗೂ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಒಂದೂವರೆ ವರ್ಷದ ಹಿಂದೆಯೇ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ಬಗ್ಗೆ ಆಗಿಂದಾಗ್ಗೆ ಚರ್ಚೆಗಳು ಆಗುತ್ತಿವೆ ಎಂದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ
ರಾಮನಗರ(ಡಿ25): ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಚರ್ಚೆ ಒಂದೂವರೆ ವರ್ಷಗಳಿಂದ ನಡೆಯುತ್ತಿದ್ದು, ಇದು ರಾಜಕೀಯ ಪ್ರೇರಿತ ಅಲ್ಲ. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಗರಾಭಿವೃದ್ಧಿ ಹಾಗೂ ಕೈಗಾರಿಕೆಗಳ ಸ್ಥಾಪನೆ ಸೇರಿ ಬೇರೆ ಬೇರೆ ಕಾರಣಗಳಿಂದಾಗಿ ಗ್ರಾಮೀಣ ಭಾಗಗಳಲ್ಲಿ ಒಕ್ಕಲಿಗರು ಜಮೀನು ಕಳೆದುಕೊಳ್ಳುತ್ತಿದ್ದಾರೆ. ತುಂಡು ಭೂಮಿಯಲ್ಲಿ ಕೃಷಿ ಮಾಡಿ ಬದುಕು ರೂಪಿಸಿಕೊಳ್ಳುವುದೂ ಸವಾಲಾಗಿದೆ. ಅನೇಕ ಸಮಸ್ಯೆಗಳೂ ಇವೆ. ಹೀಗಾಗಿ ಅವರಿಗೆಲ್ಲ ಮೀಸಲಾತಿ ಮೂಲಕ ಬದುಕು ಕಲ್ಪಿಸಬೇಕಿದೆ. ಕಾನೂನು ಚೌಕಟ್ಟಿನಲ್ಲಿ ಆ ಕೆಲಸ ಮಾಡಬೇಕಿದೆ ಎಂದರು.
ಶೀಘ್ರ ವರದಿ ಸಲ್ಲಿಕೆಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ: ಸಿಎಂ ಬೊಮ್ಮಾಯಿ
ಒಕ್ಕಲಿಗ ನಾಯಕತ್ವ ಹಾಗೂ ಚುನಾವಣೆ ಸಲುವಾಗಿ ಮೀಸಲಾತಿ ಪ್ರಶ್ನೆ ಎತ್ತಿದ್ದಾರೆಂಬ ಯತ್ನಾಳ್ ಹೇಳಿಕೆಗೆ ಉತ್ತರಿಸಿದ ಸಚಿವರು, ರಾಜ್ಯ ಒಕ್ಕಲಿಗ ಸಂಘ ಹಾಗೂ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಒಂದೂವರೆ ವರ್ಷದ ಹಿಂದೆಯೇ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ಬಗ್ಗೆ ಆಗಿಂದಾಗ್ಗೆ ಚರ್ಚೆಗಳು ಆಗುತ್ತಿವೆ ಎಂದರು.