ಕೊಪ್ಪಳ: ಅಕ್ರಮ ಚಟುವಟಿಕೆ, ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಎಸ್ಪಿಗೆ ಪತ್ರ

ಮರಳು, ಅಕ್ರಮ ಮದ್ಯ, ಜೂಜು ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಎಸ್ಪಿಗೆ ಪತ್ರ ಬರೆದ ಸಚಿವ ಪಾಟೀಲ| ನಿಮ್ಮ ವ್ಯಾಪ್ತಿಯಲ್ಲಿ ಸಚಿವರ ಪತ್ರದಂತೆ ಅಕ್ರಮವನ್ನು ತಡೆಯದಿದ್ದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು. ನಿಮ್ಮ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಸಚಿವ ಪಾಟೀಲ| 

Minister B C Patil Letter to SP for Illegal Activity in Koppal District

ಕೊಪ್ಪಳ(ಸೆ.13): ಜಿಲ್ಲಾದ್ಯಂತ ಅಕ್ರಮ ಚಟುವಟಿಕೆ ಮಿತಿ ಮೀರುತ್ತಿದೆ. ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಜೂಜು ಎಲ್ಲವೂ ಎಗ್ಗಿಲ್ಲದೆ ನಡೆಯುತ್ತಿದೆ. ಕೂಡಲೇ ಇವುಗಳ ಕುರಿತು ನಿಗಾ ವಹಿಸಿ. ಹೀಗಂತ ಯಾರೋ ಪ್ರತಿಪಕ್ಷದವರು ಆರೋಪ ಮಾಡಿಲ್ಲ. ಸ್ವತಃ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ಲಿಖಿತ ಪತ್ರವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರಿಗೆ ಬರೆದು ಕ್ರಮಕ್ಕೆ ಸೂಚಿಸಿದ್ದಾರೆ.

ಅಚ್ಚರಿ ಮೂಡಿಸಿದ ಪತ್ರ:

ಸಾಮಾನ್ಯವಾಗಿ ಈ ರೀತಿ ಆರೋಪಗಳು ಬಂದಾಗ ಅದರ ಕುರಿ​ತು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ತಾವೇ ಆರೋಪಗಳೊಂದಿಗೆ ಪತ್ರವನ್ನು ಎಸ್ಪಿಗೆ ಬರೆದಿರುವುದು ಈಗ ಜಿಲ್ಲೆಯಲ್ಲಿ ಅಚ್ಚರಿ ಮೂಡಿಸಿದೆ. ಅವರ ಲಿಖಿತ ಪತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದೂ ಸಹ ಹೇಳಿದ್ದಾರೆ. ಸಚಿವರೇ ಈ ರೀತಿಯಾಗಿ ಹೇಳಿರುವುದರಿಂದ ಈಗ ಜಿಲ್ಲೆಯಲ್ಲಿ ಭಾರೀ ಚರ್ಚೆಯಾಗುತ್ತಿದೆ.

'ಸಚಿವ ಬಿ.ಸಿ. ಪಾಟೀಲ್‌ ರಾಜಕೀಯದಲ್ಲಿ ನಟನೆ ಮಾಡಿದ್ದು ಸಾಕು, ಯೂರಿಯಾ ಪೂರೈ​ಸ​ಲಿ'

ಆಡಳಿತ ಪಕ್ಷದ ಶಾಸಕರೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಜೂಜು, ಇಸ್ಪೀಟ್‌ ಅವ್ಯಾಹತವಾಗಿದೆ. ಇನ್ನು ಮರಳು ದಂಧೆಯೂ ನಡೆಯುತ್ತಿದೆ ಎನ್ನುವ ಅನೇಕ ಆರೋಪಗಳನ್ನು ಸಚಿವರೆದುರು ಮಾಡಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿಯೂ ತೀವ್ರ ಸಮಸ್ಯೆಯಾಗುತ್ತಿದೆ, ಚಿಕಿತ್ಸೆಯೇ ಸರಿಯಾಗಿ ದೊರೆಯುತ್ತಿಲ್ಲ ಎಂದು ಸ್ವತಃ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ದೂರಿದ್ದಾರೆ. ಆಕ್ಸಿಜನ್‌ ಕೊರತೆ ಸೇರಿದಂತೆ ಮೊದಲಾದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟುರುವುದನ್ನು ನೋಡಿದರೆ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ ಎನ್ನುವುದು ಗೊತ್ತಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಮತ್ತು ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳು ಪ್ರವೇಶ ಪಡೆಯಬೇಕು ಎಂದರೆ ಹರ​ಸಾ​ಹಸ ಪಡು​ವಂತಾ​ಗಿ​ದೆ. ಈಗ ಇದೆಲ್ಲದರ ಜೊತೆಗೆ ಸಚಿವರು ಎಸ್ಪಿಗೆ ಬರೆದಿರುವ ಪತ್ರವನ್ನು ನೋಡಿದರೆ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಪಕ್ಕಾ ಆದಂತಾಗಿದೆ. ಹಾಗಾದರೆ ಯಾರು ಇದಕ್ಕೆ ಹೊಣೆ ಎನ್ನುವುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಠಾಣಾಧಿಕಾರಿಗಳೇ ಹೊಣೆ:

ಈಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಪತ್ರವನ್ನು ಉಲ್ಲೇಖಿಸಿ ಜಿಲ್ಲಾದ್ಯಂತ ಇರುವ ಪೊಲೀಸ್‌ ಠಾಣೆಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತಾ ಪತ್ರ ಬರೆದಿದ್ದಾರೆ. ನಿಮ್ಮ ವ್ಯಾಪ್ತಿಯಲ್ಲಿ ಸಚಿವರ ಪತ್ರದಂತೆ ಅಕ್ರಮವನ್ನು ತಡೆಯದಿದ್ದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು. ನಿಮ್ಮ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕೂಡಲೇ ನೀವೇ ಕ್ರಮ ಕೈಗೊಂಡು ಜೂಜು, ಮರಳು ದಂಧೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಎಲ್ಲದರ ಮೇಲೆಯೂ ಕಡಿವಾಣ ಹಾಕಬೇಕು. ನಮಗೆ ಅಲ್ಲಿ ಅಕ್ರಮ ನಡೆಯುತ್ತಿರುವ ಮಾಹಿತಿ ದೊರೆತರೆ ಖಂಡಿತವಾಗಿಯೂ ನಿಮ್ಮ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.
 

Latest Videos
Follow Us:
Download App:
  • android
  • ios