ವಿಜಯನಗರ ಜಿಲ್ಲೆ ಮಾಡೋದೆ ನನ್ನ ಪ್ರಮುಖ ಬೇಡಿಕೆ|ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ವಿಜಯನಗರ ಜಿಲ್ಲೆ ಮಾಡಲು ಆಶೀರ್ವಾದ ಮಾಡುತ್ತಾ​ನೆ ಎಂಬ ವಿಶ್ವಾಸ ಹೊಂದಿದ್ದೇನೆ| ನೂತನ ಸಚಿ​ವ​ರಾಗಿ ನಗ​ರಕ್ಕೆ ಆಗ​ಮಿ​ಸಿದ ಆನಂದ್‌ ಸಿಂಗ್‌ ವಿಶ್ವಾಸ|

ಹೊಸಪೇಟೆ[ಫೆ.08]: ಮಂತ್ರಿಯಾಗುವುದು ನನ್ನ ಉದ್ದೇಶವಾಗಿರಲಿಲ್ಲ. ವಿಜಯನಗರ ಜಿಲ್ಲೆ ಮಾಡೋದೆ ನನ್ನ ಪ್ರಮುಖ ಬೇಡಿಕೆಯಾಗಿದೆ. ವಿಜಯನಗರ ಜಿಲ್ಲೆ ಘೋಷಣೆ ಮಾಡಿದಾಗ ಮಾತ್ರ ಕ್ಷೇತ್ರದ ಜನರ ಬೇಡಿಕೆ ಈಡೇರಿದಂತಾಗುತ್ತದೆ. ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ತನ್ನ ಕ್ಷೇತ್ರದ ಹೆಸರನ್ನು ಉಳಿಸಿಕೊಳ್ಳಲು ವಿಜಯನಗರ ಜಿಲ್ಲೆ ಮಾಡಲು ಆಶೀರ್ವಾದ ಮಾಡುತ್ತಾ​ನೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ಸಚಿವ ಆನಂದ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನೂತನ ಸಚಿವರಾಗಿ ಪ್ರಾಮಾಣವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತ​ನಾ​ಡಿದ ಅವರು, ವಿಜಯನಗರ ಜಿಲ್ಲೆ ನನಗಾಗಿ ಅಲ್ಲ. ಈಗಾಗಲೇ ಅನೇಕ ವರ್ಷಗಳಿಂದ ಜಿಲ್ಲೆಗಾಗಿ ಹೋರಾಟ ನಡೆಸಿಕೊಂಡು ಬಂದಿರುವ ನಮ್ಮ ಜನರಿಗಾಗಿ ಬೇಕಾಗಿದೆ. ಇದು ಕೇವಲ ನನ್ನ ಒಬ್ಬನ ಹೋರಾಟವಲ್ಲ. ಅನೇಕ ಜನರ ಹೋರಾಟ. ವಿಜಯನಗರ ಸಾಮ್ರಾಜ್ಯವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ಮಾಡುವಂತೆ ಒತ್ತಾಯ ಮಾಡುತ್ತಿದ್ದೇವೆ. ಬಳ್ಳಾರಿ ಜಿಲ್ಲೆ ವಿಭಜನೆಯಾಗಲಿ ಅಂತಾ ನಾವು ಕೇಳ್ತಾ ಇಲ್ಲ. ವಿಜಯನಗರ ಕಾಲದಲ್ಲಿ ಕೃಷ್ಣದೇವರಾಯ ಇಲ್ಲಿ ಆಡಳಿತ ನಡೆಸಿರುವ ಇದು ಮೂಲ ಸ್ಥಾನವಾಗಿರುವುದರಿಂದ ಇದನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸುತ್ತಿದ್ದೇವೆ.

ಕೊಟ್ಟ ಮಾತಿನಂತೆ ನಡೆದುಕೊಳ್ತೀರಾ ಸಿಂಗ್: ವಿಜಯನಗರ ಆಗುತ್ತಾ ಜಿಲ್ಲೆ?

ವಿಜಯನಗರ ಜಿಲ್ಲೆ ಕುರಿತು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಳಿ ಬೇಡಿಕೆ ಇಡಲಾಗಿತ್ತು. ಮುಖ್ಯಮಂತ್ರಿ ಚುನಾವಣೆ ನಂತರ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ತೇನೆ ಎಂದಿದ್ದರು. ಈಗ ಚುನಾವಣೆ ಮುಗಿದಿದೆ. ಇನ್ನು ಜಿಲ್ಲೆಯನ್ನು ಘೋಷಣೆ ಮಾಡಬೇಕು. ಕೆಲವೇ ದಿನಗಳಲ್ಲಿ ಸಿಎಂ ಜಿಲ್ಲೆ ಘೋಷಣೆ ಮಾಡ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ಯಾರ ತ್ಯಾಗದಿಂದ ಸರ್ಕಾರ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಗೊತ್ತಿದೆ. ಹೀಗಾಗಿ ಯಾವ ಖಾತೆ ಯಾರಿಗೆ ಕೊಡಬೇಕು ಅನ್ನೋದು ಅವರೇ ನಿರ್ಧಾರ ಮಾಡ್ತಾರೆ. ನನಗೆ ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನುಭವ, ಹೋರಾಟದಲ್ಲೇ ರಾಜಕೀಯ ಜೀವನ ನಡೆಸಿಕೊಂಡು ಬಂದಿದ್ದರೆ. ಮುಂದಿನ ಮೂರು ವರ್ಷ ಅವರ ಜೊತೆಗೂಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಶ್ರೀರಾಮುಲುಗೆ ಕೊಡಬೇಕು ಎನ್ನುವುದು ನಮ್ಮ ಅಭಿಪ್ರಾಯ. ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಅವರಿಗೆ ಮೊದಲ ಅದ್ಯತೆ ನೀಡುವಂತೆ ಪಕ್ಷದ ಹೈಕಮೆಂಡ್‌ಗೆ ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಮುಖ್ಯಮಂತ್ರಿ ಹಾಗೂ ಶ್ರೀರಾಮುಲು ಇಲ್ಲ ನೀನೇ ಆಗಬೇಕು ಅಂತಾ ಅಪ್ಪಣೆ ಕೊಟ್ಟು ಜಿಲ್ಲೆಯ ಉಸ್ತುವಾರಿ ವಹಿಸಿದ್ರೆ ಒಪ್ಪಿಕೊಳ್ಳುವೆ ಎಂದರು.

17 ಜನರು ಬೇರೆ ಬೇರೆ ಕಾರಣಗಳಿಂದ ರಾಜೀನಾಮೆ ಕೊಟ್ಟಿದ್ದಾರೆ. 17 ಜನರ ತ್ಯಾಗದಿಂದ ಇವತ್ತು ಸರ್ಕಾರ ಬಂದಿದೆ. ಸಚಿವ ಸ್ಥಾನ ವಂಚಿತರ ಬೆನ್ನಿಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದಾರೆ. ಹೀಗಾಗಿ ಖಂಡಿತ ಅವರನ್ನ ಕೈಬಿಡಲ್ಲ. ಚುನಾವಣೆ ಬಳಿಕ ಸಂಪುಟ ರಚನೆ ಸಮಸ್ಯೆಗಳಿದ್ದವು. ನಿನ್ನೆಯಷ್ಟೇ ಎಲ್ಲ ಸಮಸ್ಯೆಗಳು ಬಗೆಹರಿದಿವೆ ಎಂದರು.