ವಿಜಯನಗರ ಜಿಲ್ಲೆ ಅಭಿವೃದ್ಧಿಗಾಗಿ ರಾಜಕೀಯ ನಿವೃತ್ತಿ ಇಲ್ಲ| ಜಿಲ್ಲೆ ಬೇಡಿಕೆ ಸಿಎಂ ಈಡೇರಿಕೆ, ಕಾಂಗ್ರೆಸ್‌ ಎಂದಿಗೂ ಅಧಿಕಾರಕ್ಕೆ ಬರಲ್ಲ| ಪ್ರಧಾನಿ ನರೇಂದ್ರ ಮೋದಿ ಸ್ಟೈಲ್‌ನಲ್ಲಿ ಜಿಲ್ಲೆ ಆಗುತ್ತೆ ಎಂದಿದ್ದೇ ಈಗ ಬೇಡಿಕೆ ಈಡೇರಿದೆ|ಮುಖ್ಯ​ಮಂತ್ರಿ ಯಡಿಯೂರಪ್ಪರ ಬಳಿ ಜಿಲ್ಲೆ, ಏತ ನೀರಾವರಿ ಯೋಜನೆ ಬೇಡಿಕೆ ಇಟ್ಟಿದ್ದೆ. ಅವರು ಪೂರೈಸಿದ್ದಾರೆ ಎಂದ ಸಿಂಗ್‌| 

ಹೊಸಪೇಟೆ(ಫೆ.13): ನನಗೆ ಮಂತ್ರಿಯಾಗೋ ಆಸೆ ಇರಲಿಲ್ಲ. ಸಮ್ಮಿಶ್ರ ಸರ್ಕಾ​ರದಲ್ಲಿ ಮಂತ್ರಿ ನೀಡುತ್ತೇವೆ ಎಂದ್ರು. ನಾನು ಜಿಲ್ಲೆ ಬೇಕು ಎಂದು ಪಟ್ಟು ಹಿಡಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಈಗಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಸಾರ್ವಜನಿಕ ಬದುಕಿನಲ್ಲಿ ಇರುವೆ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್ ಸಚಿವ ಆನಂದ್‌ ಸಿಂಗ್‌ ಸ್ಪಷ್ಟ​ಪ​ಡಿ​ಸಿ​ದ್ದಾರೆ. 

ನಗರದ ಪಟೇಲ್‌ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ರಾಜಕಾರಣದಿಂದ ನಿವೃತ್ತಿ ಹೊಂದುವೆ ಎಂದು ಹೇಳಿದ್ದೆ. ಆದರೆ, ವಿಜಯನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಸಲುವಾಗಿ ಈಗಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ನುಡಿದಂತೆ ನಡೆದು ವಿರೂಪಾಕ್ಷೇಶ್ವರನ ಆಶೀರ್ವಾದದಿಂದ ವಿಜಯನಗರ ಜಿಲ್ಲೆ ರಚನೆ ಮಾಡಿಸಿರುವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಭಾವಚಿತ್ರವನ್ನು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಹಾಕಬೇಕು. ಅಂಥ ಉತ್ತಮ ಕಾರ್ಯವನ್ನು ಅವರು ನಮಗೆ ಮಾಡಿದ್ದಾರೆ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ:

ಕಾಂಗ್ರೆಸ್‌ ಸರ್ಕಾರ ಬಂದರೆ ಮತ್ತೆ ವಿಜಯನಗರ ಜಿಲ್ಲೆಯನ್ನು ಬಳ್ಳಾರಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಎಂದಿಗೂ ಅಧಿಕಾರಕ್ಕೆ ಬರುವು​ದಿಲ್ಲ. ಬಳ್ಳಾರಿ ಜಿಲ್ಲೆ ಹಾಗೂ ವಿಜಯನಗರ ಜಿಲ್ಲೆ ಯಾವತ್ತಿದ್ರೂ ಒಂದೇ. ಆಡಳಿತಾತ್ಮಕ ಕಾರಣದಿಂದ ಬೇರೆ ಬೇರೆಯಾಗಿವೆ ಅಷ್ಟೇ ಎಂದರು.

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ!

‘ಜೋ ಡರ್‌ಗಯಾ ಓ ಮರ್‌ಗಯಾ’ ಹೀಗಾಗಿ ಜೀವನದಲ್ಲಿ ಚಾಣಕ್ಯತನದಿಂದ ಕೆಲಸ ಮಾಡಿಸಿಕೊಳ್ಳಬೇಕು. ನಾನು ಮೊದಲು ರಾಜೀನಾಮೆ ನೀಡಿದೆ. ಬಳಿಕ 16 ಶಾಸಕರು ರಾಜೀನಾಮೆ ಸಲ್ಲಿಸಿದರು. ಮುಖ್ಯ​ಮಂತ್ರಿ ಯಡಿಯೂರಪ್ಪರ ಬಳಿ ಜಿಲ್ಲೆ, ಏತ ನೀರಾವರಿ ಯೋಜನೆ ಬೇಡಿಕೆ ಇಟ್ಟಿದ್ದೆ. ಅವರು ಪೂರೈಸಿದ್ದಾರೆ ಎಂದು ಹೇಳಿದರು.

ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ರಾಮಲಿಂಗಪ್ಪ, ಪೂಜಪ್ಪ, ಕವಿತಾ ಈಶ್ವರ್‌ ಸಿಂಗ್‌, ವ್ಯಾಸನಕೆರೆ ಶ್ರೀನಿವಾಸ್‌, ಕಟಿಗಿ ರಾಮಕೃಷ್ಣ, ಶಶಿಧರಸ್ವಾಮಿ, ಟಿಂಕರ್‌ ರಫೀಕ್‌, ಬಸವರಾಜ್‌ ನಾಲತ್ವಾಡ, ಸಂಗಪ್ಪ, ಭಾರತಿ ಪಾಟೀಲ್‌, ಬಶೀರ್‌, ಜೀವರತ್ನ ಮತ್ತಿತರರಿದ್ದರು. ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ರಧಾನಿ ಸ್ಟೈಲ್‌ನಲ್ಲಿ ಹೇಳಿದ್ದೆ

ವಿಜಯನಗರ ಜಿಲ್ಲೆ ರಚನೆ ಮಾಡುವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಂದರೆ ನಮ್ಮ ಗುರುಗಳ ಸ್ಟೈಲ್‌ನಲ್ಲಿ ಚಪ್ಪಾಳೆ ತಟ್ಟಿ ತಾಲೂಕು ಕ್ರೀಡಾಂಗಣದಲ್ಲಿ ಹೇಳಿದ್ದೆ. ಈಗ ಜಿಲ್ಲೆ ತಂದಿದ್ದು, ಅದೇ ಸ್ಟೈಲ್‌ನಲ್ಲಿ ಚಪ್ಪಾಳೆ ತಟ್ಟಿ ಹೇಳುವೆ ಎಂದು ಸಚಿವ ಸಿಂಗ್‌ ಹೇಳಿದರು.