ಕೊಪ್ಪಳ: ನವಲಿ ಸಮಾನಾಂತರ ಜಲಾಶಯಕ್ಕೆ ಶೀಘ್ರ ಭೂಮಿಪೂಜೆ, ಆನಂದ ಸಿಂಗ್
ಆನೆಗೊಂದಿ, ಕನಕಗಿರಿ ಉತ್ಸವವನ್ನು ಮಾಡುವುದಕ್ಕೆ ಸರ್ಕಾರ ಉತ್ಸುಕವಾಗಿದೆ. ಶೀಘ್ರದಲ್ಲಿಯೇ ಈ ಕುರಿತು ಸಭೆ ನಡೆಸಿ, ದಿನಾಂಕ ಪ್ರಕಟಣೆ ಮಾಡಲಾಗುವುದು. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದ ಆನಂದ ಸಿಂಗ್
ಕೊಪ್ಪಳ(ನ.24): ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಡಿಪಿಆರ್ ಮಾಡಲಾಗಿದ್ದು, ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ಜತೆ ಪತ್ರ ವ್ಯವಹಾರವನ್ನು ರಾಜ್ಯ ಸರ್ಕಾರ ನಡೆಸಿದ್ದು, ಪ್ರಸಕ್ತ ಸರ್ಕಾರದ ಅವಧಿಯಲ್ಲಿಯೇ ಜಲಾಶಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದರು.
ತಾಲೂಕಿನ ಮುನಿರಾಬಾದ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಕೇವಲ ರಾಜ್ಯ ಸರ್ಕಾರದಿಂದ ಮಾತ್ರ ಮಾಡುವುದಾಗಿದ್ದರೆ ಈಗಲೇ ಹೇಳಬಹುದಿತ್ತು. ಆದರೆ, ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಸಮ್ಮತಿಯೂ ಬೇಕಾಗಿರುವುದರಿಂದ ರಾಜ್ಯ ಸರ್ಕಾರ ಅಲ್ಲಿಯ ರಾಜ್ಯ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಿದೆ. ಈ ಕುರಿತು ಏನು ಬೆಳವಣಿಗೆಯಾಗಿದೆ ಎನ್ನುವುದನ್ನು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ನಂತರ ಮಾಹಿತಿ ನೀಡುತ್ತೇನೆ ಎಂದರು.
ಈ ವರ್ಷ ಜಲಾಶಯ ಭರ್ತಿಯಾದ ಮೇಲೆಯೂ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ. ಆದರೂ ನೀರಿನ ಸಮಸ್ಯೆಯಾಗಿದೆ. ಆದ್ದರಿಂದ ನವಲಿ ಸಮಾನಾಂತರ ಜಲಾಶಯವಾದರೆ ಇದೆಲ್ಲ ಸಮಸ್ಯೆಯೂ ಇತ್ಯರ್ಥವಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರ 1 ಸಾವಿರ ಕೋಟಿ ನೀಡಿದೆ. ಪ್ರಸಕ್ತ ಸರ್ಕಾರದ ಅವಧಿಯಲ್ಲಿಯೇ ಭೂಮಿಪೂಜೆಯನ್ನು ನೆರವೇರಿಸಲಾಗುವುದು ಮತ್ತು ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುವುದರಿಂದ ಜಲಾಶಯ ನಿರ್ಮಾಣ ಮಾಡಿಯೆ ತೀರುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಠಿಣ ಕ್ರಮ:
ನೀರಾವರಿ ಸಲಹಾ ಸಮಿತಿಯಲ್ಲಿ ಅನೇಕ ರೈತರು ನೀರು ಕಳ್ಳತನವಾಗುತ್ತದೆ. ಇದರಿಂದ ರಾಯಚೂರು ಜಿಲೆಯ ಅಂಚು ಪ್ರದೇಶಕ್ಕೆ ನೀರು ಬರುವುದೇ ಇಲ್ಲ ಎಂದಿದ್ದಾರೆ. ಹೀಗಾಗಿ ಈ ಬಾರಿ ಎರಡನೇ ಬೆಳೆಗೆ ನೀರು ಬಿಟ್ಟವೇಳೆ ನೀರು ಕದಿಯುವುದನ್ನು ಪತ್ತೆ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಒಳಗೊಂಡು ಸಮಿತಿ ರಚಿಸಿ ನಿಗಾ ಇಡಲಾಗುವುದು ಎಂದರು. ಆನೆಗೊಂದಿ, ಕನಕಗಿರಿ ಉತ್ಸವವನ್ನು ಮಾಡುವುದಕ್ಕೆ ಸರ್ಕಾರ ಉತ್ಸುಕವಾಗಿದೆ. ಶೀಘ್ರದಲ್ಲಿಯೇ ಈ ಕುರಿತು ಸಭೆ ನಡೆಸಿ, ದಿನಾಂಕ ಪ್ರಕಟಣೆ ಮಾಡಲಾಗುವುದು. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.